ಮಂಡ್ಯ : ಗಾಯದ ಮೇಲೆ ಬರೆ ಎಂಬಂತೆ ಮತ್ತೆ ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಸಿಡಬ್ಲ್ಯೂಆರ್ಸಿ ಆದೇಶ ಮಾಡಿದೆ. ಇದು ಮತ್ತಷ್ಟು ಮಂಡ್ಯ ಜಿಲ್ಲೆಯ ಅನ್ನದಾತರ ಆಕ್ರೋಶಕ್ಕೆ ಕಾರಣವಾಗಿದೆ. ಇವತ್ತು ಸಕ್ಕರೆ ನಗರಿಯಲ್ಲಿ ಸಾಲು ಸಾಲು ವಿಭಿನ್ನ ವಿಶೇಷ ಪ್ರತಿಭಟನೆ ನಡೆದವು. ಇವತ್ತಿನ ಕಾವೇರಿ ಹೋರಾಟದಲ್ಲಿ ಸ್ವಾಮೀಜಿಗಳು ಸಹ ಪ್ರತಿಭಟನೆಗೆ ಸಾಥ್ ನೀಡಿದ್ರು.
ಹೌದು, ಜೀವನದಿ ಕಾವೇರಿ, ಜೀವನಾಡಿ ಕೆಆರ್ಎಸ್ ಜಲಾಶಯಕ್ಕಾಗಿ ಮಂಡ್ಯ ಜಿಲ್ಲೆಯ ಅನ್ನದಾತರು ಕಳೆದ ಹಲವು ದಿನಗಳಿಂದ ರಸ್ತೆಗೆ ಇಳಿದು ಹೋರಾಟ ಮಾಡುತ್ತಿದ್ದಾರೆ. ಸಂಕಷ್ಟ ಪರಿಸ್ಥಿತಿಯಲ್ಲಿ ನೀರು ಬಿಡುವುದಿಲ್ಲ ಎಂಬ ಕೂಗು ಹಾಕುತ್ತಿದ್ದಾರೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಗಾಯದ ಮೇಲೆ ಬರೆ ಎಂಬಂತೆ ಮತ್ತೆ ಸಿಡಬ್ಲ್ಯೂಆರ್ಸಿ ತಮಿಳುನಾಡಿಗೆ 18 ದಿನಗಳ ಕಾಲ ನೀರು ಹರಿಸುವಂತೆ ಆದೇಶ ಮಾಡಿದೆ. ಇದು ಜಿಲ್ಲೆಯ ಅನ್ನದಾತರು, ಹೋರಾಟಗಾರರನ್ನು ಕೆರಳುವಂತೆ ಮಾಡಿದೆ.
ಹೀಗಾಗಿ ಇವತ್ತು ಮಂಡ್ಯದಲ್ಲಿ ಸಾಲು ಸಾಲು ಪ್ರತಿಭಟನೆಗಳನ್ನು ನಡೆಸಿ ಆಕ್ರೋಶವನ್ನ ಹೊರಹಾಕಿದ್ರು. ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬಿಜೆಪಿ ಕಾರ್ಯಕರ್ತರು ವಿನೂತನ ಪ್ರತಿಭಟನೆ ನಡೆಸಿದ್ರು. ರಾಜ್ಯ ಸರ್ಕಾರ ಸಗಣಿ ಹಾಕುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸಗಣಿ ನೀರು ಸುರಿದುಕೊಂಡು ಪ್ರತಿಭಟನೆ ನಡೆಸಿದರು. ಇದಕ್ಕೂ ಮೊದಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಬೆಳೆಗಳನ್ನು ಬೆಳೆಯಲು ನೀರಿಲ್ಲ. ಹೀಗಾಗಿ ಕೊಳಚೆ ನೀರಲ್ಲಿ ಗಾಂಜಾ ಬೆಳೆಯಲು ಅವಕಾಶ ಕೊಡಿ, ಇಲ್ಲ ದಯಾಮರಣ ಕೊಡಿ ಎಂದು ಮನವಿ ಮಾಡಿದ್ರು. ಮತ್ತೊಂದು ಕಡೆ ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಮಂಡ್ಯದ ಸಂಜಯ್ ಸರ್ಕಲ್ನಲ್ಲಿ ಹೆದ್ದಾರಿ ತಡೆ ನಡೆಸಿ, ರಕ್ತವನ್ನ ಕೊಟ್ಟೆವು ನೀರನ್ನ ಕೊಡುವುದಿಲ್ಲ ಎಂದು ಪ್ರತಿಭಟಿಸಿದರು.
ಇನ್ನು ಕಾವೇರಿ ನೀರಿಗಾಗಿ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಧರಣಿ ಇಂದು ಸಹ ಮುಂದುವರೆದಿತ್ತು. ರೈತರ ಈ ಹೋರಾಟಕ್ಕೆ ನಂಜಾವಧೂತ ಸ್ವಾಮೀಜಿ ಕೂಡ ಸಾಥ್ ನೀಡಿದ್ರು. ಮೊದಲಿಗೆ ಮಂಡ್ಯದ ಸಂಜಯ್ ಸರ್ಕಲ್ನಲ್ಲಿ ಹೆದ್ದಾರಿ ತಡೆ ನಡೆಸಿ ನಂತರ ಸಂಜಯ್ ಸರ್ಕಲ್ ನಿಂದ ವಿಶ್ವೇಶ್ವರಯ್ಯ ಪ್ರತಿಮೆವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಇದೇ ವೇಳೆ ಮಾತನಾಡಿದ ಸ್ವಾಮೀಜಿ, ನೀರು ಹರಿಸಬಾರದು ಎಂದು ಒತ್ತಾಯ ಮಾಡಿ ಸರ್ಕಾರ ದೃಢ ನಿರ್ಧಾರ ತೆಗೆದುಕೊಳ್ಳಬೇಕು. ನಿಮ್ಮ ಜೊತೆ ನಾವಿದ್ದೇವೆ ಎಂದು ಸಲಹೆ ನೀಡಿದರು. ಸ್ವಾಮೀಜಿ ಅವರಿಗೆ ಕನ್ನಡಪರ ಸಂಘಟನೆಗಳು ಸಾಥ್ ನೀಡಿದವು.
ಒಟ್ಟಾರೆ ಮಂಡ್ಯದಲ್ಲಿ ಕಾವೇರಿ ಕಿಚ್ಚು ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದೆ. ಯಾವುದೇ ಕಾರಣಕ್ಕೂ ನೀರು ಹರಿಸಬಾರದು ಎಂದು ಅನ್ನದಾತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನು ಹೋರಾಟ ತೀವ್ರ ಸ್ವರೂಪ ಪಡೆಯೋದ್ರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದು ಕಂಡುಬರುತ್ತಿದೆ.
ಇದನ್ನೂ ಓದಿ: ಕಾವೇರಿ ನೀರು ವಿಚಾರವಾಗಿ ಕಮಲ-ದಳ ಜಂಟಿ ಹೋರಾಟ; ಸರ್ಕಾರಕ್ಕೆ ಬಿಎಸ್ವೈ, ಹೆಚ್ಡಿಕೆ ಎಚ್ಚರಿಕೆ ಸಂದೇಶ