ಮಂಡ್ಯ: ಜಿಲ್ಲೆಯಲ್ಲಿ ಮಂಗಳವಾರ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಕೌಟುಂಬಿಕ ಕಲಹ ಹಿನ್ನೆಲೆ ಒಂದೇ ಕುಟುಂಬದ ಮೂವರು ದುರಂತ ಅಂತ್ಯ ಕಂಡಿದ್ದಾರೆ. ಪ್ರೀತಿಸಿ ಮದುವೆಯಾದ ದಂಪತಿ ತಮ್ಮ ಒಂದೂವರೆ ವರ್ಷದ ಕಂದಮ್ಮನನ್ನು ಕೊಂದು ಬಳಿಕ ತಾವು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಜಿಲ್ಲೆಯ ನಾಗಮಂಗಲ ತಾಲೂಕಿನ ಗಂಗವಾಡಿ ಗ್ರಾಮದಲ್ಲಿ ನಡೆದಿದೆ.
ಗಂಗವಾಡಿ ಗ್ರಾಮದ ತನುಶ್ರೀ (22), ರಘು (28) ಹಾಗೂ ಇವರಿಬ್ಬರ ಒಂದೂವರೆ ವರ್ಷದ ಮಗು ಸಿರಿ ಮೃತರು. ಕೌಟುಂಬಿಕ ಕಲಹ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಡೆತ್‌ನೋಟ್ ಬರೆದಿಟ್ಟು ಸಾವನ್ನಪ್ಪಿದ್ದಾರೆ.
ಒಂದೂವರೆ ವರ್ಷದ ಮಗುವನ್ನು ಸಾಯಿಸಿ ನಂತರ ಪತಿ-ಪತ್ನಿ ಇಬ್ಬರೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಂಗವಾಡಿ ಗ್ರಾಮದ ತನುಶ್ರೀ ಹಾಗೂ ಮಂಡ್ಯ ಮೂಲದ ರಘು ಕಳೆದ ಮೂರು ವರ್ಷಗಳ ಹಿಂದಷ್ಟೇ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ಸಿರಿ ಎಂಬ ಒಂದೂವರೆ ವರ್ಷದ ಮುದ್ದಾದ ಮಗುವಿತ್ತು. ಮದುವೆಯಾದ ನಂತರವೂ ಮಗುವಿನೊಂದಿಗೆ ದಂಪತಿ ಗಂಗವಾಡಿ ಗ್ರಾಮದಲ್ಲಿ ಪ್ರತ್ಯೇಕವಾಗಿ ಮನೆಮಾಡಿಕೊಂಡು ಅನ್ಯೋನ್ಯವಾಗಿದ್ದರು.
ಇದನ್ನೂ ಓದಿ: ಗಸ್ತು ವೇಳೆ ತನಗೆ ಕಚ್ಚಿದ ನಾಯಿಯನ್ನು ಹೊಡೆದು ಕೊಂದ ಎಎಸ್‌ಐ
ಆದ್ರೆ, ಕೆಲ ದಿನಗಳಿಂದ ದಂಪತಿಯ ನಡುವೆ ಮನಸ್ತಾಪ ಉಂಟಾಗಿ, ವಿವಾಹ ವಿಚ್ಛೇದನ ಪಡೆಯಲೂ ಸಹ ಮುಂದಾಗಿದ್ದರು ಎನ್ನಲಾಗ್ತಿದೆ. ಮಂಗಳವಾರ ಮಧ್ಯಾಹ್ನದವರೆಗೂ ಮಗುವನ್ನು ಆಟವಾಡಿಸಿಕೊಂಡಿದ್ದು, ಬಳಿಕ ಸಂಜೆ ವೇಳೆಗೆ ಮಗುವನ್ನು ಸಾಯಿಸಿ ತಾವೂ ಸಹ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಳದಲ್ಲಿ ನಮ್ಮ ಸಾವಿಗೆ ಯಾರೂ ಕಾರಣವಲ್ಲ. ನಾವೇ ಕಾರಣ ಎಂದು ಬರೆದಿರುವ ಡೆತ್‌ನೋಟ್ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಸಿಪಿಐ ಸುಧಾಕರ್ ಆಗಮಿಸಿದ್ದಾರೆ. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.