ಮಂಡ್ಯ: ಯಡಿಯೂರಪ್ಪನವರೇ ನೀವು ಹಳ್ಳಿಯ ಬಡ ರೈತ ಕುಟುಂಬದಿಂದ ಬಂದವರು. ನಿಮಗೆ ರೈತರ ಸಂಕಷ್ಟ ಅರ್ಥವಾಗುತ್ತಿಲ್ಲವೇ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. ಕೆ.ಆರ್ ಪೇಟೆಯ ಪುರಸಭಾ ಮೈದಾನದಲ್ಲಿ ಕಾಂಗ್ರೆಸ್ ತಾಲೂಕು ಘಟಕದಿಂದ ಆಯೋಜಿಸಿದ್ದ ಕೊರೊನಾ ವಾರಿಯರ್‌ಗಳಿಗೆ ಆಹಾರ ಕಿಟ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅವರಿಗೆ 56 ಇಂಚು ಅಗಲದ ಎದೆ ಇರುವುದು ಮುಖ್ಯವಲ್ಲ, ಬಡವರಿಗೆ ಸ್ಪಂದಿಸುವ ಹೃದಯವಿರುವುದು ಮುಖ್ಯ ಎಂದು ಪ್ರಧಾನಿ ನರೇಂದ್ರ ಮೋದಿಗೆ ಪರೋಕ್ಷ ಟಾಂಗ್ ನೀಡಿದರು.
ನೀರಾವರಿ ಯೋಜನೆಯ 20 ಸಾವಿರ ಕೋಟಿ ರೂಪಾಯಿ ಕಾಮಗಾರಿಯ ಟೆಂಡರ್‌ನಲ್ಲಿ ಸಿಎಂ ಕುಟುಂಬಕ್ಕೆ 2 ಸಾವಿರ ಕೋಟಿ ಕಿಕ್‌ಬ್ಯಾಕ್ ಬಂದಿದೆ ಎಂದು ಸ್ವಪಕ್ಷೀಯರೇ ಆರೋಪ ಮಾಡಿದರೂ ಏನೂ ಆಗಿಲ್ಲವೆಂದು ತಿಪ್ಪೆ ಸಾರಿಸುತ್ತಿರಲ್ಲ. ನಿಮಗೇನಾದರೂ ನೈತಿಕತೆ ಇದ್ದರೆ, ಅಧಿಕಾರದಿಂದ ಕೆಳಗಿಳಿಯಿರಿ ಸಿಎಂ ಬಿಎಸ್ವೈ ವಿರುದ್ಧ ಕಿಡಿಕಾರಿದರು.
ಇದನ್ನೂ ಓದಿ: ರೇಖಾ ಕದಿರೇಶ್ ಕೊಲೆ ಪ್ರಕರಣ: 24 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವುದಾಗಿ ಸಿಎಂ ಖಡಕ್ ಮಾತು
ನಾನು ನಿಮ್ಮ ಮತ್ತು ನಿಮ್ಮ ಮಗನ ಕಿಕ್‌ಬ್ಯಾಕ್ ಬಗ್ಗೆ ಹೇಳುತ್ತಿಲ್ಲ. ನಿಮ್ಮ ಪಕ್ಷದವರೇ ಆದ ಹೆಚ್.ವಿಶ್ವನಾಥ್, ಯತ್ನಾಳ್, ಸಚಿವ ಸಿ.ಪಿ ಯೋಗೇಶ್ವರ್ ನಿಮ್ಮ ಮತ್ತು ನಿಮ್ಮ ಮಗ ವಿಜಯೇಂದ್ರನ ಭ್ರಷ್ಟಾಚಾರದ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ಆದರೆ, ನೀವು ಏಕೆ ತನಿಖೆ ನಡೆಸುತ್ತಿಲ್ಲ ಎಂದು ಪ್ರಶ್ನಿಸಿದರು.
ನಿಮ್ಮ ಎಡವಟ್ಟು ಮತ್ತು ನಿಮ್ಮ ಮಂತ್ರಿಮಂಡಲದ ಸದಸ್ಯರ ಅತಿರೇಕದಿಂದ ರಾಜ್ಯದಲ್ಲಿ ಕೊರೊನಾ ಹೆಚ್ಚಿತು. ಅನ್ನಭಾಗ್ಯದ ಅಕ್ಕಿಯನ್ನು ಕಡಿತಗೊಳಿಸಿದಿರಿ. 10 ಕೆ.ಜಿ.ಅಕ್ಕಿ ಕೊಟ್ಟಿದ್ದರೆ ನಿಮ್ಮಪ್ಪನ ಮನೆಯ ಆಸ್ತಿ ಹೋಗುತ್ತಿತ್ತೇ ಎಂದು ಕಿಡಿಕಾರಿದರು. ಲಂಚದ ಹಣವನ್ನು ಬಳಸಿಕೊಂಡು ವಿಜಯೇಂದ್ರನ ತಂತ್ರದ ಮೂಲಕ ಕೆ.ಆರ್.ಪೇಟೆ ಸೇರಿದಂತೆ ಹಲವು ಉಪಚುನಾವಣೆಗಳಲ್ಲಿ ಗೆಲುವು ಸಾಧಿಸಿಕೊಂಡಿರಿ. ಆದರೆ ನಿಮ್ಮ ಆಟ ಮಸ್ಕಿಯಲ್ಲಿ ನಡೆಯಲಿಲ್ಲ ಎಂದು ವ್ಯಂಗ್ಯವಾಡಿದರು.
'ಹಾಲಿಗೆ ನೀರು ಸದನದಲ್ಲಿ ಪ್ರಶ್ನಿಸುವೆ': ಮಂಡ್ಯ ಮನ್‌ಮುಲ್‌ನಲ್ಲಿ ನೀರು ಮಿಶ್ರಿತ ಹಾಲು ಸರಬರಾಜು ಆಗುತ್ತಿದೆ ಎಂದು ವರದಿಯಾಗಿದೆ. ಸಹಕಾರ ಸಂಸ್ಥೆಗಳು ಉಳಿಯಬೇಕಾದರೆ ಸಮಗ್ರ ತನಿಖೆ ನಡೆಸಿ ಎಂದು ಸಿಎಂಗೆ ಮತ್ತು ಸಹಕಾರ ಮಂತ್ರಿಗೆ ಫೋನ್ ಮಾಡಿ ಹೇಳಿದ್ದೆ. ಸೂಪರ್ ಸೀಡ್ ಮಾಡುವುದಾಗಿ ಹೇಳಿದ್ದವರು ಈಗ ಜೆಡಿಎಸ್‌ನವರ ಮಾತು ಕೇಳಿಕೊಂಡು ಗಪ್ ಚುಪ್ ಆಗಿದ್ದಾರೆಂದು ತಿಳಿದುಬಂದಿದೆ. ನಾನು ಸುಮ್ಮನಿರಲ್ಲ ಸದನದಲ್ಲಿ ಈ ಅವ್ಯವಹಾರದ ಬಗ್ಗೆ ಪ್ರಶ್ನಿಸುತ್ತೇನೆ ಎಂದರು.