ಮಂಡ್ಯ: ಬರೋಬ್ಬರಿ 48 ಗಂಟೆ, ಸುಮಾರು 40 ಅಧಿಕಾರಿಗಳು ಮತ್ತು ಸಿಬ್ಬಂದಿಯ ಪರಿಶ್ರಮದ ಫಲವಾಗಿ ಮಳವಳ್ಳಿ ಹಾಗೂ ಮದ್ದೂರು ತಾಲೂಕಿನ ವಿವಿಧೆಡೆ ಅಬ್ಬರಿಸಿ ಜನರಲ್ಲಿ ಆತಂಕ ಸೃಷ್ಟಿಸಿದ ಪುಂಡಾನೆ ಮೌಂಟೇನ್ ಟಸ್ಕರ್-3945 ಅನ್ನು ಸೆರೆ ಹಿಡಿಯಲಾಗಿದೆ. ಕುಶಾಲನಗರದ ದುಬಾರೆ ಕ್ಯಾಂಪ್‍ನಿಂದ ಕರೆಸಿದ್ದ ಅಭಿಮನ್ಯು, ಭೀಮ, ಗಣೇಶ ಹಾಗೂ ಗೋಪಾಲಸ್ವಾಮಿ ಆನೆಗಳು ಸಹಾಯದೊಂದಿಗೆ ಆಪರೇಷನ್ ಮೌಂಟೇನ್ ಟಸ್ಕರ್ ಸಕ್ಸಸ್ ಆಗಿದೆ.
ಜನರ ನಿದ್ದೆಗೆಡಿಸಿದ್ದ ಪುಂಡಾನೆ:
ಚಾಮರಾಜನಗರ ಜಿಲ್ಲೆಯ ಕೌದಳ್ಳಿ ಅರಣ್ಯ ಪ್ರದೇಶದಿಂದ ಆಹಾರ ಅರಸಿ ಹಲಗೂರು ಮಾರ್ಗದ ಮೂಲಕ ಶಿಂಷಾ ನದಿಯಲ್ಲಿ ಸಾಗಿ ಬಂದಿರುವ ಈ ಆನೆ ಕೂಳಗೆರೆ ಗ್ರಾಮದ ಬಳಿ ಕಾಣಿಸಿಕೊಂಡಿತ್ತು. ಗ್ರಾಮದ ಮರಿಸ್ವಾಮಿ ಎಂಬುವವರು ಬಹಿರ್ದೆಸೆಗೆ ಹೋದಾಗ ಆನೆ ಕಂಡು ಹೆದರಿ ಸ್ಥಳದಿಂದ ಓಡಿ ಬಂದು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಇದರಿಂದಾಗಿ ಜನರು ಆತಂಕಕ್ಕೀಡಾಗಿದ್ದರು.
ಕಾಡಾನೆ ಕಾಣಿಸಿಕೊಂಡಿರುವ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳ ತಂಡ ಜನರು ನದಿ ಪಾತ್ರದ ಜಮೀನಿಗೆ ಹೋಗದಂತೆ ಹಾಗೂ ಮನೆಗಳಿಂದ ಹೊರ ಬರದಂತೆ ಧ್ವನಿ ವರ್ಧಕ ಮೂಲಕ ಎಚ್ಚರಿಕೆ ನೀಡಿದ್ದರು.
ಇದನ್ನೂ ಓದಿ: ಎಲ್‌ಇಟಿ ಮುಖ್ಯ ಕಮಾಂಡರ್ ಸೇರಿ ಇಬ್ಬರು ಉಗ್ರರ ಹತ್ಯೆಗೈದ ಸೇನೆ
ಈ ಆನೆಯನ್ನು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಸೆರೆಹಿಡಿದು ಅರಣ್ಯ ವಲಯಕ್ಕೆ ಬಿಡುವ ಸಮಯದಲ್ಲಿ ಕೊರಳಿಗೆ ರೇಡಿಯೋ ಕಾಲರ್ ಅಳವಡಿಸಲಾಗಿತ್ತು. ಇದರಿಂದ ಸಕಲೇಶಪುರ ಆನೆ ಎಂದು ಇಲಾಖೆಯ ಅಧಿಕಾರಿಗಳು ದೃಢಪಡಿಸಿದ್ದರು. ಬಳಿಕ ಆನೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಚಾಮರಾಜನಗರ ಜಿಲ್ಲೆಯ ಕೌದಳ್ಳಿ ಅರಣ್ಯಾ ಪ್ರದೇಶಕ್ಕೆ ಬಿಟ್ಟಿದ್ದರು. ಆನಂತರ ಆಹಾರ ಅರಸಿ ಶಿಂಷಾನದಿ ಮೂಲಕ ಹಲಗೂರು ಮಾರ್ಗವಾಗಿ ಬಂದು ಕೂಳಗೆರೆ ಭಾಗದಲ್ಲಿ ಈ ಆನೆ ಬೀಡುಬಿಟ್ಟಿತ್ತು.
ಆನೆ ಹಿಂದೆ ಅರಣ್ಯ ಇಲಾಖಾಧಿಕಾರಿಗಳು:
ಎರಡು ದಿನದಿಂದ ಆನೆಯ ಹಿಂದೆ ಅರಣ್ಯ ಇಲಾಖೆಯ 40 ಅಧಿಕಾರಿ, ಸಿಬ್ಬಂದಿ ಅಲೆದಾಡಿದ್ದರು. ಅಂತೆಯೇ ಭಾನುವಾರ ರಾತ್ರಿ ದುಬಾರೆ ಕ್ಯಾಂಪ್‍ನಿಂದ ನಾಲ್ಕು ಆನೆಗಳನ್ನು ಕರೆಸಿಕೊಳ್ಳಲಾಯಿತು.
ಕೊನೆಗೆ ಮದ್ದೂರು-ಚನ್ನಪಟ್ಟಣ ಗಡಿ ಭಾಗದ ಗುಡ್ಡದಲ್ಲಿ ಮೌಂಟೇನ್ ಟಸ್ಕರ್ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ನಾಲ್ಕು ಆನೆಗಳ ಸಹಾಯದಿಂದ ಪುಂಡಾನೆಯನ್ನು ಸೆರೆ ಹಿಡಿಯಲಾಯಿತು.
ಕಾರ್ಯಾಚರಣೆಯಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ.ರವಿಶಂಕರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಶಿಧರ್, ವಲಯ ಅರಣ್ಯಾಧಿಕಾರಿಗಳಾದ ಆಸೀಪ್ ಅಹಮದ್, ಶಿಲ್ಪಾ, ನಾಗೇಂದ್ರ ಪ್ರಸಾದ್ ಸೇರಿದಂತೆ ಸಿಬ್ಬಂದಿ ಭಾಗವಹಿಸಿದ್ದರು.