ಮಂಡ್ಯ: ಒಬ್ಬನನ್ನ ಒಮ್ಮೆ ಫೂಲ್ ಮಾಡಬಹುದು. ಪ್ರತಿ ಸಲವೂ ಫೂಲ್ ಮಾಡಲು ಆಗಲ್ಲ. ಕಣ್ಣೀರು ಹಾಕುವುದು ದೇವೇಗೌಡರ ಕುಟುಂಬದ ಹುಟ್ಟು ಗುಣ ಎಂದು ಕೇಂದ್ರ ಸಚಿವ ಡಿ ವಿ ಸದಾನಂದಗೌಡ ಲೇವಡಿ ಮಾಡಿದ್ದಾರೆ.
ಕೆಆರ್‌ಪೇಟೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡರ ಪರ ಪ್ರಚಾರಕ್ಕೂ ಮೊದಲು ಮಾತನಾಡಿದ ಅವರು, ಕುಮಾರಸ್ವಾಮಿ ಕಣ್ಣೀರಿನ ಬಗ್ಗೆ ಜಮೀರ್ ಬಹಳ ಚೆನ್ನಾಗಿ ಹೇಳಿದ್ದಾರೆ. ಸುಮಾರು 20 ವರ್ಷಗಳ ಕಾಲ ಗಳಸ್ಯ, ಕಂಟಸ್ಯರಂತೆ ಇದ್ದವರು. ಜಮೀರ್ ಹೇಳಿದಂತೆ ಅದು ವಿಕ್ಸ್ ಕಣ್ಣೀರೇ ಇರಬೇಕು ಎಂದು ಕುಮಾರಸ್ವಾಮಿ ಕಣ್ಣೀರ ಕುರಿತು ಲೇವಡಿ ಮಾಡಿದ್ದಾರೆ.
ಜನ ಇದನ್ನೆಲ್ಲ ನೋಡಿ ನೋಡಿ ಬೇಸತ್ತು ಹೋಗಿದ್ದಾರೆ. ಇವತ್ತು ಜನ ಪ್ರಜ್ಞಾವಂತರಾಗಿದ್ದಾರೆ. ಒಳ್ಳೆಯ ರೀತಿ ಆಲೋಚಿಸಿ ಜನ ಮತದಾನ ಮಾಡುತ್ತಾರೆ. ಕುಮಾರಸ್ವಾಮಿ ಯಾವ ಸೀಮೆ ಜ್ಯೋತಿಷಿ ಅನ್ನೋದು ಗೊತ್ತಿಲ್ಲ. ಸಿದ್ದರಾಮಯ್ಯ, ಹೆಚ್‌ಡಿಕೆ ಹೇಳಿದ್ದೆಲ್ಲ ಈವರೆಗೂ ಉಲ್ಟಾ ಆಗಿದೆ. ಹಾಗಾಗಿ ಈ ಬಾರಿಯೂ ಉಲ್ಟಾ ಆಗೋದು ನಿಶ್ಚಿತ ಎಂದಿದ್ದಾರೆ.
ಇದೇ ವೇಳೆ ಮಹಾರಾಷ್ಟ್ರ ಸರ್ಕಾರ ರಚನೆ ಕುರಿತು ಮಾತನಾಡಿದ ಅವರು, ಸಂಪ್ರದಾಯದಂತೆ ಹೆಚ್ಚು ಸ್ಥಾನ ಪಡೆದಿದ್ದ ನಾವು ಸರ್ಕಾರ ರಚನೆ ಮಾಡಿದ್ದೆವು. ಬಹುಮತ ಇಲ್ಲದ ಕಾರಣ ರಾಜೀನಾಮೆ ಕೊಟ್ಟಿದ್ದೇವೆ. ರಾಜಕಾರಣದಲ್ಲಿ ಇದೆಲ್ಲ ಸ್ವಾಭಾವಿಕ. ಇದಕ್ಕೆಲ್ಲ ದೇವರು ಕೊಟ್ಟಿದ್ದು, ಮತ್ತೊಬ್ಬರು ಕೊಟ್ಟದ್ದು ಅಂತೇಳೋದು ಬೇಡ. ಇವರ ಸಿಎಂ ಸ್ಥಾನ ಹೋಯ್ತಲ್ಲ ಅದು ದೇವರು ಕೊಟ್ಟ ವರವಾ? ಎಂದು ಕುಮಾರಸ್ವಾಮಿಗೆ ಪ್ರಶ್ನೆ ಹಾಕಿದರು.
ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆ ವಿಚಾರವಾಗಿ ಅವರು ಹೇಳಿದ್ದು ಕರೆಕ್ಟ್ ಇದೆ. 15 ಜನ ಶಾಸಕರ ಜೊತೆ ಮೈತ್ರಿ ಮಾಡಿಕೊಂಡು ಬಿಜೆಪಿ ಸರ್ಕಾರ ರಚನೆ ಆಗುತ್ತೆ. ಪಾಪ ಮಾಡಿದವರು ಶಾಪ ಕೊಟ್ಟರೆ ಯಾರಿಗೂ ತಟ್ಟಲ್ಲ. ಅದು ಅವರಿಗೇ ಬೌನ್ಸ್ ಬ್ಯಾಕ್ ಆಗುತ್ತೆ ಎಂದು ವಾಗ್ದಾಳಿ ಮಾಡಿದರು.