ಮಂಡ್ಯ: ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಲಾಕ್ಡೌನ್ ನ್ನು ಜನತೆಯ ಮೇಲೆ ಏರಿದೆ. ಆದರೆ ಜನರು ಸರ್ಕಾರದ ನಿರ್ಧಾರಕ್ಕೆ ಕಿವಿಗೊಡದೇ ಎಲ್ಲೆಂದರಲ್ಲಿ ಓಡಾಡುತ್ತಿದ್ದಾರೆ. ಹೀಗಾಗಿ ಮಂಡ್ಯ ಪೊಲೀಸ್ ಜನರ ಮೇಲೆ ಕಣ್ಣು ಇಟ್ಟಿದ್ದಾರೆ.
ನಗರದಲ್ಲಿ ಎಲ್ಲೆಂದರಲ್ಲಿ ಓಡಾಡುತ್ತಿದ್ದ ಜನರ ಮೇಲೆ ಹದ್ದಿನ ಕಣ್ಣಿಡಲು ಪೊಲೀಸ್ ಇಲಾಖೆ ಡ್ರೋಣ್ ಮೊರೆ ಹೋಗಿದೆ. ದಿನಕ್ಕೆ ಎರಡು ಬಾರಿ ನಗರದ ಮೇಲೆ ಡ್ರೋಣ್ ಕ್ಯಾಮರಾ ಹಾರಿಸುವ ಮೂಲಕ ಜನರ ಚಲನ ವಲನಗಳ ಮೇಲೆ ಪೊಲೀಸ್ ಇಲಾಖೆ ಕಣ್ಣಿಟ್ಟಿದೆ. ಜನ ಸಂದಣಿ ಕಾಣಸಿಗುವ ಕಡೆ ಸಿಬ್ಬಂದಿಗೆ ಮಾಹಿತಿ ನೀಡಿ ಆ ಸ್ಥಳಕ್ಕೆ ಕಳುಹಿಸಿ ಜನರನ್ನು ಚದುರಿಸಲು ಮುಂದಾಗಿದೆ. ಮಂಡ್ಯ ಡಿವೈಎಸ್ಪಿ ನವೀನ್ ನೇತೃತ್ವದಲ್ಲಿ ತಂಡ ರಚಿಸಿ ಕಾರ್ಯಾರಂಭ ಮಾಡಿದೆ.
ನಗರದ ಜನನಿಬಿಡ ಪ್ರದೇಶಗಳಾದ ಪೇಟೆ ಬೀದಿ, ಆನೆಕೆರೆ, ಬೆಂಗಳೂರು-ಮೈಸೂರು ಹೆದ್ದಾರಿ ಸೇರಿದಂತೆ ಪಶ್ಚಿಮ, ಪೂರ್ವ ಹಾಗೂ ಸೆಂಟ್ರಲ್ ಪೊಲೀಸ್ ಠಾಣೆ ವ್ಯಾಪ್ತಿಯ ಎಲ್ಲಾ ಪ್ರದೇಶಗಳ ಮೇಲೆ ಗಮನವಿಟ್ಟಿದೆ. ನಿತ್ಯ ಡ್ರೋಣ್ ಹಾರಿಸಿ ಚಲನ ವಲನ ವೀಕ್ಷಣೆ ಮಾಡಲಾಗುತ್ತಿದೆ. ಇದರಿಂದ ಜನರ ಸಂಚಾರವನ್ನು ನಿಯಂತ್ರಿಸಲು ಸಾಧ್ಯವಾಗುತ್ತಿದೆ.
ಪೊಲೀಸ್ ಇಲಾಖೆಯ ಈ ನಿರ್ಧಾರ ಸ್ವಲ್ಪ ಮಟ್ಟಿಗೆ ಜನರ ದಟ್ಟಣೆ ನಿಯಂತ್ರಣಕ್ಕೆ ಸಹಕಾರಿಯಾಗಿದೆ. ಡ್ರೋಣ್ ಮೊರೆ ಹೋದ ಪೊಲೀಸರಿಗೆ ಪ್ರಜ್ಞಾವಂತರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.