ಮಂಡ್ಯ: ಖ್ಯಾತ ವೈದ್ಯ ಡಾ.ವೇಣುಗೋಪಾಲ್ (57) ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಮದ್ದೂರು ತಾಲೂಕಿನ ಕುದುರಗುಂಡಿ ಗ್ರಾಮದ ಕೆರೆಯ ಬಳಿ ಇಂದು (ಶುಕ್ರವಾರ) ಬೆಳಿಗ್ಗೆ ಕಂಡುಬಂದಿದೆ. ಇವರು ಮಂಡ್ಯದ ಉಮ್ಮಡಹಳ್ಳಿ ಗೇಟ್ ಸಮೀಪದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆ ಸಾಂಜೋ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಡಾ.ವೇಣುಗೋಪಾಲ್ ಎಂದಿನಂತೆ ಗುರುವಾರ ಬೆಳಿಗ್ಗೆ ಆಸ್ಪತ್ರೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದು ಹಲವು ಮಂದಿಗೆ ಚಿಕಿತ್ಸೆ ನೀಡಿದ್ದಾರೆ. ಮಧ್ಯಾಹ್ನ 3-4 ಗಂಟೆಯ ಸುಮಾರಿಗೆ ಆಸ್ಪತ್ರೆಯಿಂದ ಹೊರಟು ಮದ್ದೂರು ಸಾರಿಗೆ ಬಸ್ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಗುರುವಾರ ರಾತ್ರಿ 10 ಗಂಟೆ ವೇಳೆಗೆ ಮದ್ದೂರು ತಾಲೂಕಿನ ಕುದುರಗುಂಡಿ ಗ್ರಾಮದ ಕೆರೆಯ ಬಳಿ ತೆರಳಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಸ್ಥಳೀಯರು ಇಂದು ಬೆಳಗ್ಗೆ ಕೃಷಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ತೆರಳಿದ್ದಾಗ ವೇಣುಗೋಪಾಲ್ ಮೃತದೇಹ ಕೆರೆಯ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೂಡಲೇ ಜನರು ಮದ್ದೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ ಬಳಿಕ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಶವವನ್ನು ರವಾನಿಸಿದ್ದಾರೆ. ಮದ್ದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಆತ್ಮಹತ್ಯೆ ಶಂಕೆ: ಗ್ರಾಮಸ್ಥರು ಹೇಳುವಂತೆ, ಸಹೋದರಿಯ ಸಾವಿನಿಂದ ಮನನೊಂದು ವೇಣುಗೋಪಾಲ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪೊಲೀಸರ ತನಿಖೆಯಿಂದ ಸತ್ಯಾಂಶ ಹೊರಬರಬೇಕಿದೆ.
ಯುವ ಪ್ರೇಮಿಗಳ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ: ಕಲಬುರಗಿಯಲ್ಲಿ ಮೇ ತಿಂಗಳಿನಲ್ಲಿ ಯುವ ಪ್ರೇಮಿಗಳ ಶವಗಳು ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅಕ್ಷತಾ ಭರಣಿ (19) ಹಾಗೂ ಪಾಂಡುರಂಗ್ ಕಿಣ್ಣಿ(20) ಮೃತರು. ಮೃತರಿಬ್ಬರು ಕೆಲವು ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದರಂತೆ. ಇದ್ದಕ್ಕಿದಂತೆ ಬೆಳಗ್ಗೆ ಮನೆಯಿಂದ ಇಬ್ಬರೂ ನಾಪತ್ತೆಯಾಗಿದ್ದರು.
ಮೊಬೈಲ್ ಕೂಡಾ ಸ್ವಿಚ್ ಆಫ್ ಆಗಿತ್ತು. ಇಬ್ಬರ ಮನೆಯವರು ಸಾಕಷ್ಟು ಹುಡುಕಾಟ ನಡೆಸಿದ್ದರೂ ಪತ್ತೆಯಾಗಿರಲಿಲ್ಲ. ಕಮಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ನಿರ್ಜನ ಪ್ರದೇಶದಲ್ಲಿ ನೇಣು ಬಿಗಿದು ಪತ್ತೆಯಾದ ಶವಗಳನ್ನು ಕಂಡು ಕುರಿಗಾಹಿಗಳು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದರು. ಬಳಿಕ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕಮಲಾಪುರ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ತನ್ನದು ಕೆಟ್ಟ ಮುಖ, ಕೆಟ್ಟ ಕೂದಲು ಎಂದು ಆತ್ಮಹತ್ಯೆ: ಬಿಹಾರದ ನಳಂದಾ ಜಿಲ್ಲೆಯಲ್ಲಿ ವಿಜಯ್ ಕುಮಾರ್ ಎಂಬ ಯುವಕನೊಬ್ಬ ತನ್ನ ಈ ಸಾವಿಗೆ ತನ್ನ ಕೆಟ್ಟ ಮುಖ ಹಾಗೂ ಕೆಟ್ಟ ಕೂದಲು ಕಾರಣ ಎಂದು ಸೂಸೈಡ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವಿಚಿತ್ರ ಪ್ರಕರಣ ನಡೆದಿತ್ತು. ತನ್ನ ಮುಖ ಹಾಗೂ ಕೂದಲಿನ ಬಗ್ಗೆ ವಿಜಯ್ ಕುಮಾರ್ ತೀವ್ರ ಅಸಮಾಧಾನ ಹೊಂದಿದ್ದ. ಮನೆಯಿಂದ ಹೊರಗೆ ಬಂದಾಗ ಜನ ತೆಗಳುತ್ತಿದ್ದರು. ಇದರಿಂದ ಮತ್ತಷ್ಟು ಮಾನಸಿಕ ಒತ್ತಡಕ್ಕೆ ಒಳಗಾಗಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ಸಹೋದರ ತಿಳಸಿದ್ದರು.
ಇದನ್ನೂ ಓದಿ: ಮದುವೆಗೆ ನಾಲ್ಕೇ ದಿನ ಬಾಕಿ ಇತ್ತು: ಹುಬ್ಬಳ್ಳಿಯಲ್ಲಿ ವ್ಯಕ್ತಿಯ ಬರ್ಬರ ಹತ್ಯೆ