ಮಂಡ್ಯ: ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ಎಂ.ಅಶ್ವಿನಿ ಅವರನ್ನು ದಿಢೀರ್ ವರ್ಗಾವಣೆ ಮಾಡಿರುವ ರಾಜ್ಯ ಸರ್ಕಾರ, ಡಾ.ಸುಮನ್ ಡಿ.ಪನ್ನೇಕರ್ ಅವರನ್ನು ನೂತನ ಅಧೀಕ್ಷಕಿಯಾಗಿ ನೇಮಿಸಿ ಆದೇಶ ಹೊರಡಿಸಿದೆ.
ಡಾ.ಎಂ. ಅಶ್ವಿನಿ ಅವರನ್ನು ಬೆಂಗಳೂರಿನ ಅಸಿಸ್ಟೆಂಟ್ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಕೇಂದ್ರ ಕಚೇರಿಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ. ಮೈಸೂರಿನ ಪೊಲೀಸ್ ಅಕಾಡೆಮಿಯಲ್ಲಿ ಡೆಪ್ಯುಟಿ ಡೈರೆಕ್ಟರ್ ಆಗಿದ್ದ ಡಾ. ಸುಮನ್ ಡಿ. ಪನ್ನೇಕರ್ ಅವರನ್ನು ಸಕ್ಕರೆ ನಾಡಿಗೆ ವರ್ಗಾವಣೆಗೊಳಿಸಲಾಗಿದೆ. 2013ರ ಬ್ಯಾಚ್ನ ಡಾ.ಸುಮನ್ ಡಿ.ಪನ್ನೇಕರ್ ಈ ಹಿಂದೆ ಕೊಡಗು ಎಸ್ಪಿಯಾಗಿ ಕಾರ್ಯ ನಿರ್ವಹಿಸಿದ್ದರು.
ಕೋವಿಡ್ ಸಮಯದಲ್ಲಿ ಎಸ್ಪಿ ಡಾ.ಎಂ.ಅಶ್ವಿನಿಯವರ ನಿವಾಸವನ್ನು ನವೀಕರಣ ಮಾಡಲಾಗಿತ್ತು. ಈ ವೇಳೆ ನಿವಾಸದ ಆವರಣದಲ್ಲಿರುವ ಮರಗಳನ್ನು ನಿಯಮಬಾಹಿರವಾಗಿ ಕಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೆ ಭಾನುವಾರ ಬೆಳಗ್ಗೆ ನಿಖಿಲ್ ಎಂಬಾತ ಎಸ್ಪಿ ನಿವಾಸದ ಬಳಿ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಅಸಭ್ಯವಾಗಿ ಕೂಗಾಡಿ ರಂಪಾಟ ಮಾಡಿದ್ದ. ಈ ಸಮಯದಲ್ಲಿ ನಿಖಿಲ್ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರ ಬಗ್ಗೆ ಕಾನ್ಸ್ಟೇಬಲ್ ಶಿವಕುಮಾರ್ ದೂರು ನೀಡಿದ್ದರೂ ಎಸ್ಪಿ ಹಾಗೂ ಪೊಲೀಸರು ಯಾವುದೇ ಕ್ರಮ ಕೈಗೊ೦ಡಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದಲ್ಲಿ ಟೀಕೆ ವ್ಯಕ್ತವಾಗಿತ್ತು.
ಈ ಘಟನೆ ಬಳಿಕ ಡಾ.ಎಂ.ಆಶ್ವಿನಿ ಎರಡು ದಿನಗಳ ಕಾಲ ರಜೆ ಹಾಕಿ ಬೆಂಗಳೂರಿಗೆ ತೆರಳಿದ್ದರು. ಅವರು ಮಂಡ್ಯಕ್ಕೆ ಆಗಮಿಸಿದ ಮರುದಿನವೇ ವರ್ಗಾವಣೆ ಆದೇಶ ಹೊರಬಿದ್ದಿದೆ.
ಇದನ್ನೂ ಓದಿ: ಮೈಸೂರಲ್ಲಿ ಭಾರಿ ಮಳೆಗೆ ಹಲವೆಡೆ ಅವಾಂತರ; ಚಾಮುಂಡಿ ಬೆಟ್ಟ ರಸ್ತೆಯಲ್ಲಿ ಭೂ ಕುಸಿತ, ಸಂಚಾರ ನಿಷೇಧ