ಮಂಡ್ಯ: ಕಾವೇರಿ ನದಿ ನೀರಿನ ವಿಚಾರದಲ್ಲಿ ಟೀಕೆ ಮಾಡುತ್ತಿರುವ ಜೆಡಿಎಸ್ ನಾಯಕರಿಗೆ ಕಾಂಗ್ರೆಸ್ ಮುಖಂಡ ಡಾ. ರವೀಂದ್ರ ಭರ್ಜರಿ ಟಾಂಗ್ ಕೊಟ್ಟಿದ್ದಾರೆ. ಸುಮಲತಾ ಕುರಿತು ಟೀಕಿಸುತ್ತಿರುವ ನೀವು ನೀವ್ಯಾಕೆ ಶಾಸಕ ಸ್ಥಾನದಲ್ಲಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ರಾಜೀನಾಮೆ ಕೊಡಿ ಎಂದು ವ್ಯಂಗ್ಯವಾಡಿದ್ದಾರೆ.
ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಬೆಂಬಲಿಸಿದ್ದ ಕಾಂಗ್ರೆಸ್ ಮುಖಂಡ ಡಾ. ರವೀಂದ್ರ ಸಮಾವೇಶದಲ್ಲಿ ಮಾತನಾಡಿ, ಜಿಲ್ಲೆಯ ಜನತೆ ಸುಮಲತಾರನ್ನು ಗೆಲ್ಲಿಸಿದ್ದೀರಿ. ಅವರ ಕೈಲಿ ನೀರು ಬಿಡಿಸಿಕೊಳ್ಳಿ ಎಂದಿದ್ದ ಜೆಡಿಎಸ್ ನಾಯಕರಿಗೆ, ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರದಲ್ಲಿ ಅಡಿಯಲ್ಲಿ ಬರುವುದಿಲ್ಲ. ಅದು ಬರುವುದು ಸುಪ್ರೀಂಕೋರ್ಟ್ ಅಡಿಯಲ್ಲಿ ಎಂದು ಜನತೆಗೆ ಮನವರಿಕೆ ಮಾಡಿಕೊಟ್ಟರು.
ಇದೇ ವೇಳೆ ಕೆಆರ್ಎಸ್ ಬಿರುಕು ಬಿಡುತ್ತಿರುವುದು ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ತೊಂದರೆ ಆಗುತ್ತಿದೆ. ಇದಕ್ಕೆ ಒಂದು ಪರಿಹಾರ ನೀಡಬೇಕು ಎಂದು ಸಂಸದರಲ್ಲಿ ಡಾ. ರವೀಂದ್ರ ಮನವಿ ಮಾಡಿದರು.
ತಂದೆಯ ಜನ್ಮದಿನಕ್ಕೆ ಗೆಲುವಿನ ಗಿಫ್ಟ್ ಕೊಟ್ಟಿದ್ದೀರಿ: ಅಭಿಷೇಕ್ ಅಂಬರೀಶ್
ಪ್ರತಿ ವರ್ಷ ನಾನು ಅಪ್ಪಾಜಿಗೆ ಏನು ಗಿಪ್ಟ್ ಕೊಡಬೇಕು ಅಂತಾ ಯೋಚನೆ ಮಾಡ್ತಿದ್ದೆ. ಆದ್ರೆ ನೀವೂ ಗೆಲುವಿನ ಗಿಫ್ಟ್ ನೀಡಿದ್ದಿರಾ. ಜೀವನದಲ್ಲಿ ಇದೇ ಮೊದಲ ಬಾರಿ ಅವರ ಹುಟ್ಟುಹಬ್ಬದ ದಿನ ನಮ್ಮ ತಂದೆ ಜೊತೆಗಿಲ್ಲ. ನಿನ್ನೆ ರಾತ್ರಿ ತಂದೆಯ ಅಗಲಿಕೆಯ ನೋವು ಕಾಡ್ತಿತ್ತು ಎಂದು ಅಭಿಷೇಕ್ ಭಾವುಕರಾದರು.
ನನಗೆ ಗೆಲುವಿನ ನಿರೀಕ್ಷೆ ಇರಲಿಲ್ಲ, ನೀವೂ ಗೆಲುವನ್ನು ನೀಡಿದ್ದೀರಾ. ಜೀವನಪೂರ್ತಿ ನಿಮ್ಮ ಪರ ಕೆಲಸ ಮಾಡಿದ್ರು ಕೂಡ ನಿಮ್ಮ ಋಣ ತೀರಿಸಲು ಸಾಧ್ಯವಿಲ್ಲ. ನಮ್ಮ ಕೈ ಹಿಡಿದು ಬೆಂಬಲಿಸಿದವರಿಗೆ ಧನ್ಯವಾದ ಎಂದು ಜ್ಯೂನಿಯರ್ ಜಲೀಲ ಹೇಳಿದ್ರು.
ಮಂಡ್ಯದ ಗತ್ತು ಇಂಡಿಯಾಗೆ ಗೊತ್ತು:
ಮಂಡ್ಯದ ಗತ್ತು ಇಂಡಿಯಾಗೆ ಗೊತ್ತು ಅನ್ನೋದನ್ನು ನೀವುಗಳೆಲ್ಲ ತೋರಿಸಿದ್ದೀರ. ನನ್ನ ಮುಖ ನೋಡಿ 2 ವೋಟ್ ಆದ್ರೂ ಹಾಕಿದ್ದೀರ ಅದಕ್ಕೆ ನಾನು ಋಣಿ. ನಾನು ಕೂಡ ನಿಮ್ಮ ಜೊತೆ ಇರ್ತೀನಿ. ನಿಮ್ಮ ನಂಬಿಕೆಯನ್ನು ನಾವೆಲ್ಲರೂ ಉಳಿಸಿಕೊಳ್ಳುತ್ತೇವೆ. 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿರುವ ನಿಮಗೆ ಧನ್ಯವಾದ. ನನ್ನ ಸಿನಿಮಾ ಮೇ 31ಕ್ಕೆ ರಿಲೀಸ್ ಆಗ್ತಿದೆ. ದಯವಿಟ್ಟು ನೋಡಿ, ಹಾರೈಸಿ ಎಂದು ಅಭಿಷೇಕ್ ಮನವಿ ಮಾಡಿದರು.