ಮಂಡ್ಯ: ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡಲೇ ರೈತರ ಜಮೀನುಗಳಿಗೆ ನೀರು ಬಿಡುವ ಹಾಗೂ ಕಬ್ಬಿನ ಬಾಕಿ ಬಿಲ್ ಪಾವತಿಸುವ ಕುರಿತು ಕ್ರಮ ತೆಗೆದುಕೊಳ್ಳಬೇಕು ಎಂದು ಮಾಜಿ ಸಚಿವ ಚೆಲುರಾಯಸ್ವಾಮಿ ಒತ್ತಾಯಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದ್ದು, ನೀರಿಲ್ಲದೇ ರೈತರು ಕಂಗಾಲಾಗಿದ್ದಾರೆ. ಹೀಗಾಗಿ ತಕ್ಷಣ ವಿ ಸಿ ನಾಲೆಗಳಿಗೆ ಸಿಎಂ ನೀರು ಬಿಡಿಸಬೇಕು ಎಂದರು.
ಜೆಡಿಎಸ್ನ ಮೂಲ ಸ್ಥಾನ ಮಂಡ್ಯ, ಇಲ್ಲಿಯೇ ರೈತರು ಹಲವು ಬವಣೆಗಳಿಂದ ಬೇಸತ್ತಿದ್ದಾರೆ. ರೈತರ ಪರವಾಗಿ ಎಂದು ಎಲ್ಲ ಸರ್ಕಾರಗಳು ಹೇಳಿಕೊಳ್ಳುತ್ತವೆ. ಅವರ ಸಮಸ್ಯೆಗಳನ್ನೇ ಆಲಿಸದೆ ಇದ್ದರೆ ಹೇಗೆ? ಜಿಲ್ಲಾಧಿಕಾರಿಯವರು ಕೂಡಲೇ ಮುಖ್ಯಮಂತ್ರಿ ಅವರೊಂದಿಗೆ ಫೋನ್ ಕರೆ ಮೂಲಕ ಮಾತನಾಡಿ ಸಮಸ್ಯೆ ಬಗೆಹರಿಸುವಂತೆ ಮನವಿ ನೀಡುತ್ತೇವೆ ಎಂದು ಚೆಲುವರಾಯಸ್ವಾಮಿ ತಿಳಿಸಿದರು.
ಇನ್ನು, ಸಕ್ಕರೆ ಕಾರ್ಖಾನೆಗಳಿಂದ ಬಾಕಿ ಉಳಿದ ಹಣವನ್ನು ರೈತರಿಗೆ ಕೊಡಿಸಬೇಕು. ಜಿಲ್ಲೆಯ ಎಲ್ಲಾ ಸಕ್ಕರೆ ಕಾರ್ಖಾನೆಗಳೂ ಬಾಕಿ ಉಳಿಸಿಕೊಂಡಿವೆ. 15 ದಿನಗಳ ಒಳಗೆ ಹಣ ಪಾವತಿಸುವ ಕಾನೂನನ್ನೂ ಸರ್ಕಾರ ಜಾರಿಗೊಳಿಸಬೇಕು ಎಂದು ಮಾಜಿ ಸಚಿವ ಇದೇ ವೇಳೆ ಆಗ್ರಹಿಸಿದರು.
ರಾಜ್ಯದಲ್ಲಿ ಈಗಲೇ ಮಧ್ಯಂತರ ಚುನಾವಣೆ ನಡೆಯುತ್ತದೆ ಎಂಬ ವಾತಾವರಣ ಕಾಣುತ್ತಿದೆ. ದೇವೇಗೌಡರು ಯಾವ ಅರ್ಥದಲ್ಲಿ ಮಧ್ಯಂತರ ಚುನಾವಣೆ ಬರುತ್ತದೆ ಎಂದು ಹೇಳಿದ್ದಾರೆ ಎಂಬುದು ನನಗೆ ತಿಳಿಯುತ್ತಿಲ್ಲ. ಆದರೂ ಅವರ ಮಾತನ್ನು ಲಘುವಾಗಿ ಪರಿಗಣಿಸುವಂತಿಲ್ಲ ಎಂದು ಚೆಲುರಾಯಸ್ವಾಮಿ ಹೇಳಿದರು.