ಮಂಡ್ಯ: ಗುದ್ದಲಿ ಪೂಜೆ ವಿಚಾರವಾಗಿ ಜೆಡಿಎಸ್ ಶಾಸಕ ಹಾಗೂ ಮಾಜಿ ಶಾಸಕರ ನಡುವೆ ವಾಗ್ವಾದ ನಡೆದು, ಗುದ್ದಲಿ ಪೂಜೆ ಮಾಡಲು ಗ್ರಾಮಸ್ಥರು ಬಿಡದ ಘಟನೆ ಮಳವಳ್ಳಿ ತಾಲೂಕಿನ ಮಾಗನೂರು ಬಳಿ ನಡೆದಿದೆ.
ಗ್ರಾಮದ ಹೊರ ವಲಯದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ನಿರ್ಮಾಣಕ್ಕೆ ಜೆಡಿಎಸ್ ಶಾಸಕ ಡಾ. ಅನ್ನದಾನಿ ಇಂದು ಗುದ್ದಲಿ ಪೂಜೆ ನೆರವೇರಿಸಲು ತೆರಳಿದ್ದರು
ಈ ಸಂದರ್ಭದಲ್ಲಿ ಗ್ರಾಮದ ಕೆಲವರು ಇದೇ ಕಾಮಗಾರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಡಳಿತದ ಕಾಲದಲ್ಲಿ ಪೂಜೆ ಮಾಡಲಾಗಿದೆ. ಮತ್ತೆ ಯಾಕೆ ಗುದ್ದಲಿ ಪೂಜೆ ಮಾಡಬೇಕು ಎಂದು ಶಾಸಕರಿಗೆ ಪ್ರಶ್ನೆ ಮಾಡಿದರು.
ಈ ಸಂದರ್ಭದಲ್ಲಿ ಶಾಕಸರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಶಾಸಕರ ಬೆಂಬಲಿಗರು ಹಾಗೂ ಮಾಜಿ ಶಾಸಕರ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದಿದೆ. ಸ್ಥಳದಲ್ಲೇ ಇದ್ದ ಪೊಲೀಸರು ಮಧ್ಯೆ ಪ್ರವೇಶ ಮಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಕಾಲೇಜು ನಿರ್ಮಾಣಕ್ಕೆ ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯ ಗುದ್ದಲಿ ಪೂಜೆ ಮಾಡಿದ್ದಾರೆ ಎಂದು ಮಾಜಿ ಸಚಿವ ನರೇಂದ್ರ ಸ್ವಾಮಿ ಬೆಂಬಲಿಗರು ಶಾಸಕರಿಗೆ ತಿಳಿಸಿದರು. ಅದಕ್ಕೆ ಶಾಸಕರು ಸಾಕ್ಷಿ ಕೇಳುತ್ತಿದ್ದಂತೆ ವಾಗ್ವಾದ ನಡೆದಿದೆ. ನಂತರ ಶಾಸಕರು ಅಲ್ಲಿಂದ ತೆರಳಿದರು.
ಗೊಂದಲದ ನಡುವೆ ಗುದ್ದಲಿ ಪೂಜೆ: ಶಾಸಕರಿಗೆ ಈಗಾಗಲೇ ಗುದ್ದಲಿ ಪೂಜೆ ಮಾಡಲಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಗೊಂದಲ ಎಬ್ಬಿಸಿದರೂ ಶಾಸಕ ಅನ್ನದಾನಿ ಪೊಲೀಸರ ರಕ್ಷಣೆ ನಡುವೆ ಗುದ್ದಲಿ ಪೂಜೆ ಮಾಡಿ ತೆರಳಿದರು.
ಶಾಸಕರ ನಡೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ ಪರಮೇಶ್ವರ್‌ಗೆ ದೂರು ನೀಡಲು ಮುಂದಾಗಿದ್ದಾರೆ. ಸಿದ್ದರಾಮಯ್ಯ ಅವರು ಗುದ್ದಲಿ ಪೂಜೆ ಮಾಡಿದರೂ ಶಾಸಕರು ಕಾಂಗ್ರೆಸ್ ನಾಯಕರನ್ನು ಕಡೆಗಣಿಸಿದ್ದಾರೆ ಎಂದು ದೂರು ನೀಡಲು ನಿರ್ಧಾರ ಮಾಡಿದ್ದಾರೆ.