ಮಂಡ್ಯ: ಮುಖಂಡ ಚಲುವರಾಯಸ್ವಾಮಿ ಕ್ಷೇತ್ರದಲ್ಲಿ ಇಂದು ದರ್ಶನ್ ಸ್ವತಂತ್ರ ಅಭ್ಯರ್ಥಿ ಸುಮಲತಾ ಪರ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.
ಇಂದು ಸುಮಾರು 36 ಗ್ರಾಮಗಳಲ್ಲಿ ರೋಡ್ ಶೋ ಮಾಡುತ್ತಿದ್ದಾರೆ. ನಾಗಮಂಗಲ ತಾಲೂಕಿನ ಗಡಿ ಭಾಗ ಚೀಣ್ಯಾದಿಂದ ಪ್ರಚಾರ ಆರಂಭ ಮಾಡಿದ ದರ್ಶನ್‌ಗೆ ಬೃಹತ್ ಸೇಬಿನ ಹಾರ ಹಾಕಿ ಸ್ವಾಗತ ಕೋರಿದರು. ಅಭಿಮಾನಿಗಳು ಬೈಕ್ ರ್ಯಾಲಿ ಮೂಲಕ ದರ್ಶನ್‌ಗೆ ಸಾಥ್ ನೀಡುತ್ತಿದ್ದಾರೆ.ಬ್ರಹ್ಮದೇವರಹಳ್ಳಿಯಲ್ಲಿ ದರ್ಶನ್ ಪಾರಿವಾಳಗಳನ್ನು ಹಾರಿ ಬಿಡುವ ಮೂಲಕ ಅಭಿಮಾನಿಗಳ ಬಳಿ ಮತಯಾಚನೆ ಮಾಡಿದರು.
ಪ್ರತಿಯೊಂದು ಗ್ರಾಮದಲ್ಲಿ ರೋಡ್ ಶೋ ಮಾಡುತ್ತಿರುವ ದರ್ಶನ್, ಸುಮಲತಾ ಅಂಬರೀಶ್ ಕ್ರಮ ಸಂಖ್ಯೆ ಜೊತೆಗೆ ಗುರುತನ್ನು ಒತ್ತಿ ಒತ್ತಿ ಹೇಳುತ್ತಿದ್ದಾರೆ.
ಅಭಿಮಾನಿಗಳು ಪ್ರತಿ ಗ್ರಾಮದಲ್ಲೂ ಪುಷ್ಪವೃಷ್ಠಿ ಸುರಿಸುತ್ತಿದ್ದಾರೆ. ಅಭಿಮಾನಿಗಳ ಅಭಿಮಾನಕ್ಕೆ ದಾಸ ಫಿದಾ ಆಗಿದ್ದಾರೆ.
ಗ್ರಾಮಕ್ಕೆ ಆಗಮಿಸುವಂತೆ ಅಭಿಮಾನಿಗಳ ಒತ್ತಡ:
ನಾಗಮಂಗಲ ತಾಲೂಕಿನ ಹೊಣಕೆರೆಯಲ್ಲಿ ಅಭಿಮಾನಿಗಳು ಗ್ರಾಮದ ಮಧ್ಯ ಭಾಗಕ್ಕೆ ಆಗಮಿಸುವಂತೆ ಒತ್ತಾಯ ಮಾಡಿ, ಕೆಲವು ಕಾಲ ಪ್ರಚಾರ ವಾಹನಕ್ಕೆ ತಡೆ ನೀಡಿದ್ದರು. ಅಭಿಮಾನಿಗಳ ಜೊತೆ ಸಂಧಾನ ಮಾಡಿದ ದರ್ಶನ್, ಗ್ರಾಮದ ಮಧ್ಯ ಭಾಗಕ್ಕೆ ಬಂದರೆ ಅವಧಿಯೊಳಗೆ ಪ್ರಚಾರ ಮುಗಿಸಲು ಸಾಧ್ಯವಿಲ್ಲ. ಈಗಾಗಲೇ ನೋಟಿಸ್ ನೀಡಲಾಗಿದೆ ಎಂದು ಮನವರಿಕೆ ಮಾಡಿಕೊಟ್ಟ ನಂತರ ವಾಹನವನ್ನು ಅಭಿಮಾನಿಗಳು ಬಿಟ್ಟರು.