ಮಂಡ್ಯ: ಆಸ್ತಿ ವಿಚಾರಕ್ಕೆ ಟವೆಲ್‌ನಿಂದ ಕುತ್ತಿಗೆ ಬಿಗಿದು ವೃದ್ಧೆಯನ್ನು ಕೊಲೆ ಮಾಡಿರುವ ಘಟನೆ ಮಂಡ್ಯ ನಗರದ ಹೆಬ್ಬಾಳ ಸಮೀಪದ ಹೊರವಲಯದಲ್ಲಿ ನಡೆದಿದೆ. ನಳಿನಿ ರಮೇಶ್(62) ಕೊಲೆಯಾದ ದುರ್ದೈವಿ.
ಕಾಫಿ ಪುಡಿ ಅಂಗಡಿ-ಚಿಕೋರಿ ಕಾರ್ಖಾನೆಯ ಮಾಲೀಕ ರಮೇಶ್ ಪತ್ನಿ ಆಗಿರುವ ಮೃತ ನಳಿನಿ ಮಂಡ್ಯ ವಿದ್ಯಾನಗರದ ನಿವಾಸಿಯಾಗಿದ್ದರು. ಉದ್ದಿಮೆ ಆರಂಭಿಸಲು ಕಾಫಿ ಪುಡಿ ಅಂಗಡಿ ಹಾಗೂ ಚಿಕೋರಿ ಕಾರ್ಖಾನೆಯನ್ನು ಬ್ಯಾಂಕ್ ನಲ್ಲಿ ಅಡಮಾನ ಇಟ್ಟಿದ್ದರು.
ಆದರೆ ಸಾಲ ತೀರಿಸಲಾಗದ ಕಾರಣ ಕಾರ್ಖಾನೆಯನ್ನು ಬ್ಯಾಂಕ್ ವಶಕ್ಕೆ ಪಡೆದಿದ್ದರಿಂದ ಮಂಡ್ಯ ಬಿಟ್ಟು ಮೈಸೂರಿನ ವೃದ್ಧಾಶ್ರಮದಲ್ಲಿ ವಾಸವಿದ್ದರು. ಇತ್ತೀಚೆಗೆ ವೃದ್ಧಾಶ್ರಮ ಬಿಟ್ಟು ವೃದ್ಧೆ ಮಂಡ್ಯದ ಚಿಕೋರಿ ಕಾರ್ಖಾನೆಯ ಮನೆಯಲ್ಲಿ ವಾಸವಿದ್ದರು.
ಆದರೆ ದುಷ್ಕರ್ಮಿಗಳು ಟವೆಲ್ ಬಳಸಿ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ. ಆಸ್ತಿಗಾಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಮಂಡ್ಯ ಎಸ್ಪಿ ಎನ್ ಯತೀಶ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸದ್ಯ ಮೃತ ವೃದ್ಧೆಯ ಶವವನ್ನು ಮಂಡ್ಯ ಮಿಮ್ಸ್ ಶವಾಗಾರಕ್ಕೆ ರವಾನಿಸಲಾಗಿದೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತ್ಯೇಕ ಪ್ರಕರಣ- ಮಹಿಳೆ ಶವ ಪತ್ತೆ: ಮಹಿಳೆಯೊಬ್ಬರು ಬೆಂಕಿಯಲ್ಲಿ ಸುಟ್ಟುಕರಕಲಾದ ಘಟನೆ ಇಂದು ಬೆಳಗ್ಗೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹಟ್ಟಿ ಪಟ್ಟಣದ ಗುಂಡೂರಾವ್ ಕಾಲೊನಿಯಲ್ಲಿ ನಡೆದಿದೆ. ಮಂಜುಳಾ (45) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ಮೃತದೇಹ ಬೆಂಕಿಯಲ್ಲಿ ಸುಡುತ್ತಿರುವ ದೃಶ್ಯ ಕಂಡು ಬಂದಿದೆ.
ಮೃತ ಮಹಿಳೆ ಹಟ್ಟಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಪ. ಒಂದೆಡೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದ್ದು, ಮತ್ತೊಂದು ಕಡೆ ಯಾರಾದರೂ ಈಕೆಯನ್ನು ಕೊಲೆ ಮಾಡಿರಬಹುದು ಎನ್ನುವ ಆರೋಪವೂ ಸ್ಥಳೀಯರಿಂದ ಕೇಳಿ ಬಂದಿದೆ. ಘಟನಾಸ್ಥಳಕ್ಕೆ ಹಟ್ಟಿ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಾಗಿದೆ.
ಘಟನೆ ಬಗ್ಗೆ ಮಾಹಿತಿ ನೀಡಿರುವ ಹಟ್ಟಿ ಪೊಲೀಸರು, ಕಳೆದ ಎರಡ್ಮೂರು ವರ್ಷಗಳ ಹಿಂದೆ ಮಹಿಳೆಯ ಪತಿ ಮೃತಪಟ್ಟಿದ್ದಾರೆ. ಮಾನಸಿಕ ಖಿನ್ನತೆಗೆ ಒಳಗಾಗಿ ಇಂದು ಬೆಳಗ್ಗೆ ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಸಹೋದರ ದೂರು ನೀಡಿದ್ದಾರೆ. ದೂರಿನ ಆಧಾರ ಮೇಲೆ ಮರಣೋತ್ತರ ಪರೀಕ್ಷೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಇದನ್ನೂಓದಿ:ಬೆಳಗಾವಿಯಲ್ಲಿ ಬಾಲಕನ ಕೊಲೆ ಪ್ರಕರಣ: ಎಸ್ಪಿ ಭೀಮಾಶಂಕರ ಗುಳೇದ ಹೇಳಿದ್ದೇನು?