ಮಂಡ್ಯ : ಮುಸ್ಕಾನ್ ಹೊಗಳಿ ಅಲ್‌ಖೈದಾ ಮುಖ್ಯಸ್ಥ ವಿಡಿಯೋ ಮಾಡಿರುವ ಹಿನ್ನೆಲೆ ಮುಸ್ಕಾನ್ ಹಾಗೂ ಕುಟುಂಬಸ್ಥರನ್ನು ವಿಚಾರಣೆ ನಡೆಸುವಂತೆ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಅಭಿಮಾನಿಗಳ ಸಂಘದವರು ಮಂಡ್ಯ ಎಸ್ಪಿಗೆ ದೂರು ಕೊಟ್ಟು ಮನವಿ ಸಲ್ಲಿಸಿದ್ದಾರೆ.
ದೂರಿನಲ್ಲಿ ಮುಸ್ಕಾನ್ ಮನೆಗೆ ಬಂದು ಹೋಗಿದ್ದ ರಾಜಕಾರಣಿಗಳು, ಸಂಘಟನೆಗಳ ಮುಖಂಡರುಗಳನ್ನ ಸಹ ತನಿಖೆ ನಡೆಸಬೇಕು. ಅವರ ಕುಟುಂಬ ಸದಸ್ಯರ ಪಾಸ್‌ಪೋರ್ಟ್ ವಶಕ್ಕೆ ಪಡೆದು, ದೇಶ ಬಿಟ್ಟು ಹೋಗದಂತೆ ಕ್ರಮಕೈಗೊಳ್ಳಬೇಕು. ಹಾಗೆಯೇ, ಸಿದ್ದರಾಮಯ್ಯನವರಿಗೆ ಆ ವಿಡಿಯೋ ಬಗ್ಗೆ ಸಂಪೂರ್ಣ ಮಾಹಿತಿ ಇದೆ ಅನಿಸುತ್ತದೆ. ರಾಷ್ಟ್ರೀಯ ತನಿಖಾ ಸಂಸ್ಥೆ ಮೂಲಕ ಅವರನ್ನ ತನಿಖೆಗೆ ಒಳಪಡಿಸುವಂತೆ ಒತ್ತಾಯಿಸಿದ್ದಾರೆ.
ವಿದ್ಯಾರ್ಥಿನಿ ಮುಸ್ಕಾನ್ ಹಿಜಾಬ್ ಗದ್ದಲ ವೇಳೆ ಜೈಶ್ರೀರಾಮ್ ಘೋಷಣೆಗೆ ಪ್ರತಿಯಾಗಿ ಅಲ್ಲಾ ಹು ಅಕ್ಬರ್ ಘೋಷಣೆ ಕೂಗಿದ್ದಳು. ಘೋಷಣೆ ಕೂಗಿದ್ದ ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ ವಿಚಾರ ದೇಶಾದ್ಯಂತ ಸುದ್ದಿಯಾಗಿತ್ತು. ಘಟನೆ ಬಳಿಕ ಮುಸ್ಲಿಂ ಸಂಘಟನೆಗಳು ಹಣ, ಉಡುಗೊರೆ, ಬಹುಮಾನ ನೀಡಿ ಬೆಂಬಲ ನೀಡಿದ್ದವು.
ಇದೀಗ ಅಲ್ ಖೈದಾ ಸಂಘಟನೆ ಮುಖ್ಯಸ್ಥನಿಂದ ಮುಸ್ಕಾನ್ ಬಗ್ಗೆ ಹೊಗಳಿಕೆ ಕೇಳಿ ಬಂದಿದೆ. ಈ ಬೆಳವಣಿಗೆ ದೇಶದ ಆಂತರಿಕ ಭದ್ರತೆಗೆ ಅಪಾಯ. ಹಿಜಾಬ್ ಹಿಂದೆ ಕಾಣದ ಕೈಗಳಿವೆ ಎಂಬ ಶಂಕೆ ಇರುವಾಗ ಈ ಘಟನೆ ಅದಕ್ಕೆ ಪುಷ್ಠಿ ನೀಡುವಂತಿದೆ ಎಂದು ಹೇಳಿ ದೂರು ನೀಡಿದ್ದಾರೆ.
ಇದನ್ನೂ ಓದಿ: ಅಲ್‌ಖೈದಾ ಮುಖಂಡನ ಹೇಳಿಕೆಯನ್ನು ಮುಸ್ಲಿಂ ನಾಯಕರು ಖಂಡಿಸಲಿ: ಶಾಸಕ ಬೆಲ್ಲದ