ಮಂಡ್ಯ: ಸುಮಲತಾ ಗೆಲುವಿನ ಬೆನ್ನಲ್ಲೇ ಕಾರ್ಯಕರ್ತರ ವಾರ್ ಆರಂಭವಾಗಿದೆ. ಜೆಡಿಎಸ್ ಹಾಗೂ ಸುಮಲತಾ ಬೆಂಬಲಿಗರು ಪರಸ್ಪರ ಹೊಡೆದಾಡಿಕೊಂಡಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಮದ್ದೂರು ತಾಲೂಕಿನ ಕೂಳಗೆರೆ ಗೇಟ್ ಬಳಿ ನಡೆದಿದೆ.
ಸುಮಲತಾ ಬೆಂಬಲಿಗರಾದ ಶಶಿಧರ್ ಮತ್ತು ಕುಮಾರ್ ಮೇಲೆ ಜೆಡಿಎಸ್ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ ಎನ್ನಲಾಗ್ತಿದ್ದು, ಗಾಯಾಳುಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ.
ನಿನ್ನೆ ಜೆಡಿಎಸ್ ಹಾಗೂ ಸುಮಲತಾ ಬೆಂಬಲಿಗರ ನಡುವೆ ಈ ಗಲಾಟೆ ಆಗಿದೆ ಎಂದು ತಿಳಿದುಬಂದಿದೆ. ಸುಮಲತಾ ಬೆಂಬಲಿಗರ ಮೇಲೆ ಹಲ್ಲೆ ಮಾಡಿದ ಆರೋಪ ಮೇಲೆ ಜೆಡಿಎಸ್ ಕಾರ್ಯಕರ್ತರಾದ ಕುಲ್ದೀಪ್, ಅಭಿಷೇಕ್, ಪ್ರಮೋದ್ ಹಾಗೂ ವರುಣ ಎಂಬುವರ ವಿರುದ್ಧ ಮದ್ದೂರು ಠಾಣೆಯಲ್ಲಿ ದೂರು ನೀಡಲಾಗಿದೆ.
ಸುಮಲತಾ ಗೆಲುವಿನ ವಿಚಾರಕ್ಕೆ ಸಂಬಂಧಿಸಿದಂತೆ ಕಾರ್ಯಕರ್ತರ ಮಧ್ಯೆ ಮಾತಿಗೆ ಮಾತು ಬೆಳೆದು ಅದು ವಿಕೋಪಕ್ಕೆ ತಿರುಗಿದೆ. ಇದರ ವಿಡಿಯೋ ಕೂಡಾ ವೈರಲ್ ಆಗಿದ್ದು, ಇದರಲ್ಲಿ ಜೆಡಿಎಸ್ ಕಾರ್ಯಕರ್ತನೋರ್ವ ಸುಮಲತಾ ಬೆಂಬಲಿಗನಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ. ಅಲ್ಲದೆ ತಮ್ಮ ಮೇಲೆ ಬಿಯರ್ ಬಾಟಲಿ ಹಾಗೂ ಚಾಕುವಿನಿಂದ ಹಲ್ಲೆ ಮಾಡಲಾಗಿದೆ ಎಂದು ಗಾಯಗೊಂಡಿರುವ ಸುಮಲತಾ ಬೆಂಬಲಿಗರು ದೂರು ನೀಡಿದ್ದಾರೆ.