ಮಂಡ್ಯ : ಕಾವೇರಿ ನದಿ ನೀರಿನ ಹಂಚಿಕೆಗೆ ಮಾಸ್ಟರ್ ಪ್ಲ್ಯಾನ್ ಮಾಡಲು ಸರ್ಕಾರ ಮುಂದಾಗಿದೆ. ಅದಕ್ಕೂ ಮುನ್ನ ಕಾವೇರಿ ಅಚ್ಚುಕಟ್ಟು ಪ್ರದೇಶದ ಎಲ್ಲಾ ಚುನಾಯಿತ ಜನ ಪ್ರತಿನಿಧಿಗಳ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಬೇಕು ಎಂದು ಶಾಸಕ ಡಿ.ಸಿ. ತಮ್ಮಣ್ಣ ಸಿಎಂಗೆ ಪತ್ರ ಬರೆದಿದ್ದಾರೆ. ತಮ್ಮಣ್ಣ ಪತ್ರಕ್ಕೆ ಸಿಎಂ ಬಿಎಸ್‌ವೈ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಮುಖ್ಯಮಂತ್ರಿಗಳ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್, ಸಿಎಂ ಪರವಾಗಿ ಶಾಸಕ ತಮ್ಮಣ್ಣ ಅವರಿಗೆ ಪತ್ರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಕಾವೇರಿ ನದಿ ನೀರು ಹಂಚಿಕೆಗೆ ಯೋಜನೆ ರೂಪಿಸುವ ಮುನ್ನ, ಕಾವೇರಿ ಅಚ್ಚುಕಟ್ಟು ಪ್ರದೇಶದ ಎಲ್ಲ ಚುನಾಯಿತ ಜನ ಪ್ರತಿನಿಧಿಗಳೊಂದಿಗೆ ಚರ್ಚಿಸಲು ಮುಖ್ಯಮಂತ್ರಿಗಳು ಒಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ಕಾವೇರಿ ನ್ಯಾಯಾಧೀಕರಣ ಮತ್ತು ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಕಾವೇರಿ ಜಲಾನಯನ ಪ್ರದೇಶಗಳಿಗೆ ಹೆಚ್ಚುವರಿಯಾಗಿ ಅಗತ್ಯವಿರುವ ನೀರನ್ನು ಸದ್ಬಳಕೆ ಮಾಡಿಕೊಳ್ಳಲು, ನಮಗಿರುವ ಅವಕಾಶದಲ್ಲಿ ಆದ್ಯತಾನುಸಾರ ಹಂಚಿಕೆ ಮಾಡಲು ಕೂಡಲೇ ಈ ವ್ಯಾಪ್ತಿಯ ಜನಪ್ರತಿನಿಧಿಗಳು ಹಾಗೂ ಹೋರಾಟಗಾರರ ಸಭೆ ಕರೆಯಬೇಕೆಂದು ಜೂ. 6ರಂದು ಶಾಸಕ ತಮ್ಮಣ್ಣ ಅವರು ಸಿಎಂಗೆ ಪತ್ರ ಬರೆದು ಆಗ್ರಹಿಸಿದ್ದರು.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕಾಳಜಿಯಿಂದ ನಮಗೆ ಹೆಚ್ಚುವರಿಯಾಗಿ 14 ಟಿ.ಎಂ.ಸಿ. ನೀರು ದೊರೆತಿದೆ. ಪ್ರಸ್ತುತ ಜಾರಿಯಲ್ಲಿರುವ ಹಂಚಿಕೆ ಪ್ರಕಾರ ಕಡೇ ಭಾಗಗಳಾದ ಮಳವಳ್ಳಿ, ಮದ್ದೂರು ಹಾಗೂ ನಾಗಮಂಗಲ ವ್ಯಾಪ್ತಿಗಳಿಗೆ ಅಗತ್ಯ ನೀರು ಪೂರೈಸಲು ಸಾಧ್ಯವಾಗದೆ, ಆ ಭಾಗದ ರೈತರು ಬೆಳೆಗಳಿಂದ ವಂಚಿತರಾಗುತ್ತಿದ್ದಾರೆ. ಇದನ್ನು ಮನಗಂಡು ಹೆಚ್ಚುವರಿ ನೀರಿನ ಹಂಚಿಕೆಯಲ್ಲಿ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದ್ದರು.