ಮಂಡ್ಯ: ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರಕ್ಕೆ ರಾಜ್ಯ ಸರ್ಕಾರದಿಂದ ಬಂಪರ್ ಕೊಡುಗೆ ಸಿಕ್ಕಿದೆ. ನೆರೆಯಿಂದ ಹಾನಿಯಾದ ಕೆರೆಗಳ ಮರು ನಿರ್ಮಾಣಕ್ಕೆ ರಾಜ್ಯ ಸರ್ಕಾರ 10 ಕೋಟಿ ರೂಪಾಯಿಗಳ ಅನುದಾನಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ.
ಹೌದು, ಕಳೆದ ಒಂದು ವಾರದ ಹಿಂದೆ ನೆರೆಯಿಂದ ಕೆ.ಆರ್. ಪೇಟೆ ತಾಲೂಕಿನ ಸಿಂಧಘಟ್ಟ, ಹರಳಹಳ್ಳಿ, ಹೊಸಹೊಳಲು, ಅಗ್ರಹಾರ ಬಾಚಹಳ್ಳಿ, ರಾಮಸಮುದ್ರ ಹಾಗೂ ದಾಸನಕೆರೆಗಳು ಮಳೆಯಿಂದ ಹಾನಿಗೊಳಗಾಗಿದ್ದವು. ಹಾನಿಗೊಂಡ ಕೆರೆಗಳ ಕಾಮಗಾರಿಗಾಗಿ ಜೆಡಿಎಸ್ ಅನರ್ಹ ಶಾಸಕ ಕೆ.ಸಿ. ನಾರಾಯಣಗೌಡ ಅವರು ಸಿಎಂ ಯಡಿಯೂರಪ್ಪಗೆ ಮನವಿ ಸಲ್ಲಿಸಿದ್ದರು.
ಮನವಿಗೆ ಸ್ಪಂದಿಸಿರುವ ಸಿಎಂ ಯಡಿಯೂರಪ್ಪ, ಕೂಡಲೇ ಕಾಮಗಾರಿ ಕೈಗೊಳ್ಳಲು 10 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿ ಕಾಮಗಾರಿ ಆರಂಭಿಸುವಂತೆ ಆರ್ಥಿಕ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.
ನಾರಾಯಣಗೌಡರು 15 ಕೋಟಿ ರೂಪಾಯಿಗಳ ಅನುದಾನ ಕೇಳಿದ್ದರು. ಆದ್ರೆ ಸಿಎಂ 10 ಕೋಟಿಗೆ ಅಸ್ತು ಎಂದಿದ್ದು, ಶೀಘ್ರವೇ ಕಾಮಗಾರಿ ಆರಂಭಗೊಳ್ಳುವ ಸಾಧ‍್ಯತೆಯಿದೆ. 4(ಜಿ) ವಿನಾಯಿತಿಯಡಿಯಲ್ಲಿ ಸಿಎಂ ಸೂಚನೆ ನೀಡಿದ್ದು, ಹೀಗಾಗಿ ಕಾಮಗಾರಿ ಆರಂಭಗೊಳ್ಳುವ ನಿರೀಕ್ಷೆಯಲ್ಲಿದ್ದಾರೆ ಇಲ್ಲಿನ ಜನತೆ.