ಮಂಡ್ಯ: ಬಡ ಕುಟುಂಬದ ಬಾಲಕಿಯೊಬ್ಬಳ ಕೈ ಶಸ್ತ್ರಚಿಕಿತ್ಸೆಯ ಖರ್ಚಿಗೆ ಸಿಎಂ ಕುಮಾರಸ್ವಾಮಿ ಧನಸಹಾಯ ನೀಡಿ ಕರುಣೆ ತೋರಿದ್ದಾರೆ.
ಲೋಕಸಮರದ ಸಮಯದಲ್ಲಿ ಸಿಎಂ ಕುಮಾರಸ್ವಾಮಿ ಕೆಆರ್ಎಸ್ನಲ್ಲಿ ವಾಸ್ತವ್ಯ ಹೂಡಿದ್ದರು. ಈ ಸಂದರ್ಭದಲ್ಲಿ ಬಡ ಕುಟುಂಬ ತಮ್ಮ ಪುತ್ರಿಯ ಕೈ ಆಪರೇಷನ್‌ಗಾಗಿ ಧನ ಸಹಾಯ ಕೇಳಿತ್ತು. ಕುಮಾರಸ್ವಾಮಿ ಈಗ ಬಾಲಕಿ ಕುಟುಂಬಕ್ಕೆ ಧನ ಸಹಾಯ ಮಾಡಿದ್ದು, ಆಪರೇಷನ್ ಮಾಡಿಸಿದ್ದಾರೆ.
ಶ್ರೀರಂಗಪಟ್ಟಣ ತಾಲೂಕಿನ ಹೊಸ ಆನಂದೂರು ಗ್ರಾಮದ ಕುಮಾರ್ ಕುಟುಂಬಕ್ಕೆ ಸಿಎಂ ಸಹಾಯ ಹಸ್ತ ಚಾಚಿದ್ದಾರೆ. ಕೊನೆಯ ಪುತ್ರಿ ರಿಯಾಂಜಲಿಯ ಬಲಗೈ ಆಪರೇಷನ್ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ. ಚುನಾವಣೆಯಲ್ಲಿ ಮಗ ನಿಖಿಲ್ ಸೋತರೂ ಬಡ ಕುಟುಂಬಕ್ಕೆ ಕೊಟ್ಟ ಭರವಸೆ ಈಡೇರಿಸಿದ್ದಾರೆ. ಸಿಎಂ ನೆರವಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಾಲಕಿ ಚೇತರಿಸಿಕೊಳ್ಳುತ್ತಿದ್ದಾಳೆ.
ಘಟನೆಯ ಹಿನ್ನೆಲೆ
ಹೆಚ್‌ಡಿ ಕುಮಾರಸ್ವಾಮಿ ಚುನಾವಣಾ ಪ್ರಚಾರದಲ್ಲಿದ್ದ ಸಂದರ್ಭದಲ್ಲಿ ಕುಮಾರ್ ಕುಟುಂಬ ಏಪ್ರಿಲ್ 10 ರಂದು ಸಿಎಂ ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಮನವಿ ಆಲಿಸಿದ್ದ ಸಿಎಂ, ಮಾರನೆಯ ದಿನ ಕುಟುಂಬವನ್ನು ಮನೆಗೆ ಕರೆಸಿಕೊಂಡು ಉಪಚರಿಸಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ರಿಯಾಂಜಲಿಗೆ ಒಂದು ತಿಂಗಳ ನಂತರ ಬಲಗೈ ಆಪರೇಷನ್ ನಡೆಸಲಾಗಿದೆ. ಈ ಮೂಲಕ ಆಕೆ ಮರುಜೀವ ಪಡೆದುಕೊಂಡಿದ್ದಳು.
ಹುಟ್ಟಿನಿಂದಲೇ ಬಲಗೈ ಸ್ವಾಧೀನ ಕಳೆದುಕೊಂಡಿದ್ದ ರಿಯಾಂಜಲಿಗೆ ಈಗ ಸ್ವಲ್ಪ ಮಟ್ಟಿಗೆ ಚಲನೆ ಸಾಧ್ಯವಾಗಿದೆ. ಶಸ್ತ್ರಚಿಕಿತ್ಸೆಗೆ ಸುಮಾರು 2 ಲಕ್ಷ ರೂಪಾಯಿ ವೆಚ್ಚವಾಗಿದ್ದು, ಎಲ್ಲವನ್ನೂ ಸಿಎಂ ಭರಿಸಿದ್ದಾರೆ. ಸದ್ಯ ಬಾಲಕಿ ಆರೋಗ್ಯವಾಗಿದ್ದಾಳೆ. ಸಿಎಂ ಸಹಾಯಕ್ಕೆ ಇಡೀ ಕುಟುಂಬ ಕೃತಜ್ಞತೆ ಸಲ್ಲಿಸಿದೆ.