ಮಂಡ್ಯ: ನದಿಗಳ ಸಂಗಮ ಸ್ಥಳ ನಮಗೆ ಪವಿತ್ರ ಸ್ಥಳಗಳಾಗಿವೆ ಎಂದು ಕುಂಭ ಮೇಳದ ಸಮಾರೋಪ ಸಮಾರಂಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ. ಪ್ರತೀ 12 ವರ್ಷಕ್ಕೊಮ್ಮೆ ಮಹಾ ಕುಂಭಮೇಳ ಆಯೋಜನೆ ಮಾಡಲು ಸರ್ಕಾರಿ ಆದೇಶ ಹೊರಡಿಸ್ತೇನೆ. ಅಲ್ಲದೆ, ತ್ರಿವೇಣಿ ಸಂಗಮದಲ್ಲಿ ಸ್ನಾನಘಟ್ಟ ಸೇರಿದಂತೆ ಇಲ್ಲಿನ ಮೂಲ ಸೌಲಭ್ಯ ಕಲ್ಪಿಸಲು ಕ್ರಮ ವಹಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇಂದು ಕುಂಭಮೇಳ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಂಡ್ಯ ಅಂದ್ರೆ ಇಂಡಿಯಾ ಅಂತಾರೆ, ಹಾಗಾಗಿ ಮಂಡ್ಯ ಜಿಲ್ಲೆಯ ಅಭಿವೃದ್ದಿಗೆ ಹಲವು ಕ್ರಮ ಕೈಗೊಳ್ಳುತ್ತೇನೆ. ಈಗಾಗಲೇ ಮೈಶುಗರ್ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಮಳೆ ಈ ಬಾರಿ ರಾಜ್ಯದ ಹಲವು ಜಿಲ್ಲೆಗಳಲ್ಲೂ ಮುಂದುವರೆದಿದೆ. ಕಳೆದ ಬಾರಿ ಮಳೆಯಿಂದಾಗಿ ಜಿಲ್ಲೆಯಲ್ಲಿ ಬೆಳೆನಷ್ಟ ಅನುಭವಿಸಿದ ರೈತರಿಗಾಗಿ ಎರಡು ಕೋಟಿ ಮೂವತ್ತು ಲಕ್ಷ ಅನುದಾನ ನೀಡಲಾಗಿದೆ. ಈ ಬಾರಿಯ ಬೆಳೆ ನಷ್ಟದ ಅಂದಾಜು ಸಿದ್ಧಪಡಿಸಿ ಪರಿಹಾರದ ಹಣವನ್ನ ಶೀಘ್ರ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದ ಸಿಎಂ, ಹಿಂದೆ ಮಳೆ ಹಾನಿಯಿಂದಾದ ನಷ್ಟ ಪರಿಹಾರ ನೀಡಲು ಒಂದು ವರ್ಷ ಬೇಕಿತ್ತು. ಈಗ ಎರಡೇ ತಿಂಗಳಲ್ಲಿ ಪರಿಹಾರ ನೀಡಲಾಗ್ತಿದೆ ಎಂದು ಹೇಳಿದರು.
ಹೆದ್ದಾರಿ ಸಮಸ್ಯೆ ಪರಿಹರಿಸಲು ಮುಂದಿನ ವಾರವೇ ಅಧಿಕಾರಿಗಳ ಸಭೆ ಕರೆದು ಚರ್ಚೆ ನಡೆಸುತ್ತೇನೆ. ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಪದೆ ಪದೇ ನೀರು ನಿಲ್ಲುತ್ತಿರುವ ವಿಚಾರವಾಗಿ ಮಾತನಾಡಿ, ಇದರ ಬಗೆಗೆ ಕಾರಣ ಏನು? ಹೆದ್ದಾರಿ ನಕ್ಷೆ, ನಿರ್ವಹಣೆ, ಯೋಜನೆ ಸೇರಿದಂತೆ ಎಲ್ಲಾ ರೀತಿಯಲ್ಲೂ ಪರಿಶೀಲನೆ ನಡೆಸಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಆರೋಪಿಗೆ ಕಠಿಣ ಶಿಕ್ಷೆಯಾಗಲಿದೆ: ಮಳವಳ್ಳಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ಕೊಲೆ ಪ್ರಕರಣ ಅದೊಂದು ಅಮಾನವೀಯ ಘಟನೆ. ಮಾನವೀಯತೆ ಇರುವ ಯಾರೂ ಈ ರೀತಿ ನಡೆದುಕೊಳ್ಳಲ್ಲ. ಘಟನೆಯನ್ನು ತೀವ್ರ ರೀತಿಯಲ್ಲಿ ಖಂಡಿಸ್ತೇನೆ. ಆರೋಪಿಗಳಿಗೆ ಮತ್ತೆ ಈ ರೀತಿ ಕೃತ್ಯ ಮಾಡಲು ಹೆದರಿಕೆ ಆಗುವಂತೆ ಇದರ ತೀರ್ಪು ಇರುತ್ತೆ. ಆದಷ್ಟು ಬೇಗ ಆರೋಪಿಗಳಿಗೆ ಶಿಕ್ಷೆ ಆಗುತ್ತೆ. ಆ ರೀತಿ ವಿಚಾರಣೆ ನಡೆಸಿ ಶೀಘ್ರ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಲಾಗುವುದು. ನಿಮ್ಮ ಮನದಲ್ಲಿ ಇರುವ ಭಾವನೆಯೇ ನನ್ನ ಮನದಲ್ಲಿದೆ. ಆದರೆ ನಾನು ಅದನ್ನು ಇಲ್ಲಿ ಹೇಳಲು ಆಗುತ್ತಿಲ್ಲ. ಎಲ್ಲಾ ಸೆಕ್ಷನ್ ಬಳಸಿ ಆರೋಪಿಗೆ ಕಠಿಣ ಶಿಕ್ಷೆಯಾಗುವಂತೆ ಮಾಡಲಾಗುತ್ತೆ ಎಂದು ಹೇಳಿದರು.
ಓದಿ: ಮೀನು ಸಸ್ಯಾಹಾರಿ, ತಿನ್ನೋರು ಮಾಂಸಹಾರಿ.. ಒಂದು ಸಾವಿರ ಮೀನುಗಾರರ ಸಂಘಗಳಿಗೆ ಸಹಾಯಧನ- ಸಿಎಂ ಬೊಮ್ಮಾಯಿ