ಮಂಡ್ಯ : ಕನ್ನಡ ನಾಡಿನ ಜೀವನಾಡಿ ಕೆಆರ್ಎಸ್ ಡ್ಯಾಂ ಸಂಪೂರ್ಣ ಭರ್ತಿಯಾಗಿರುವ ಹಿನ್ನೆಲೆ ನವೆಂಬರ್ 2ರಂದು ಸಂಪ್ರದಾಯದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾವೇರಿ ಮಾತೆಗೆ ಇದೇ ಮೊದಲ ಬಾರಿಗೆ ಬಾಗಿನ ಅರ್ಪಣೆ ಮಾಡಲಿದ್ದಾರೆ.
ಸಾಮಾನ್ಯವಾಗಿ ಜುಲೈ, ಆಗಸ್ಟ್ನಲ್ಲಿ ಭರ್ತಿಯಾಗುತ್ತಿದ್ದ ಕೆಆರ್ಎಸ್ ಜಲಾಶಯ ಈ ಬಾರಿ ಮುಂಗಾರು ಮಳೆ ಆರಂಭದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಆಗದಿರುವ ಹಿನ್ನೆಲೆ ಭರ್ತಿಯಾಗುವುದೇ ಅನುಮಾನ ಎಂಬ ಸ್ಥಿತಿಯಿತ್ತು.
ಅಕ್ಟೋಬರ್ 7ರಂದು ಮಳೆಗಾಗಿ ಪ್ರಾರ್ಥನೆ ಮಾಡಿ ಸಿಎಂ ಬೊಮ್ಮಾಯಿ ಸಮ್ಮುಖದಲ್ಲಿ ಖ್ಯಾತ ಜ್ಯೋತಿಷಿ ಡಾ. ಭಾನುಪ್ರಕಾಶ್ ಶರ್ಮಾ ಅವರು ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದ್ದರು.
ಸದ್ಯ ಡ್ಯಾಂ ಸಂಪೂರ್ಣ ಭರ್ತಿಯಾಗಿದೆ. ನ. 2ರ ಮಂಗಳವಾರ ಮಧ್ಯಾಹ್ನ 12 ರಿಂದ 2 ಗಂಟೆವರೆಗೆ ಅಭಿಜಿನ್ ಮುಹೂರ್ತದ ವೃಶ್ಚಿಕ ಲಗ್ನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಾಗಿನ ಸಮರ್ಪಣೆ ಮಾಡಲಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆಆರ್ಎಸ್ ಡ್ಯಾಂ ಇತಿಹಾಸದಲ್ಲೇ ನವೆಂಬರ್ ತಿಂಗಳಲ್ಲಿ ಬಾಗಿನ ಅರ್ಪಿಸಿದ 2ನೇ ಸಿಎಂ ಎನಿಸಿಕೊಳ್ಳಲಿದ್ದಾರೆ. ಈ ಹಿಂದೆ ಎಸ್.ಎಂ.ಕೃಷ್ಣ ಅವರು ನವೆಂಬರ್ ತಿಂಗಳಿನಲ್ಲಿ ಬಾಗಿನ ಸಮರ್ಪಣೆ ಮಾಡಿದ್ದರು. ಬಾಗಿನ ಕಾರ್ಯಕ್ರಮಕ್ಕಾಗಿ ಮಂಡ್ಯ ಜಿಲ್ಲಾಡಳಿತ ಸಿದ್ಧತೆ ಆರಂಭಿಸಿದ್ದು, ಡ್ಯಾಂ ಗೋಡೆಗಳಿಗೆ ಸುಣ್ಣ ಬಣ್ಣ ಬಳಿಯಲಾಗುತ್ತಿದೆ.
ಇದನ್ನೂ ಓದಿ: ನ. 2ರಂದು ಕಾವೇರಿಗೆ ಬಾಗಿನ ಅರ್ಪಿಸಲಿದ್ದಾರೆ ಸಿಎಂ ಬೊಮ್ಮಾಯಿ