ಮಂಡ್ಯ: ಉಗ್ರರ ವಿಚಾರದಲ್ಲಿ ಕಾಂಗ್ರೆಸ್ ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಕಾಂಗ್ರೆಸ್ ವಿರುದ್ಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದರು.
ಜಿಲ್ಲೆಯ ಪಾಂಡುಪುರ ತಾಲೂಕಿನಲ್ಲಿ ನಡೆಯುತ್ತಿರುವ ಜನಸಂಕಲ್ಪ ಕಾರ್ಯಕ್ರಮಕ್ಕೆ ಆಗಮಿಸಿದ ಬೊಮ್ಮಾಯಿ ಮಾಧ್ಯಮದೊಂದಿಗೆ ಮಾತನಾಡಿದರು. ಶಂಕಿತ ಉಗ್ರ ಶಾರಿಕ್ ವಿಚಾರವಾಗಿ ಡಿಕೆಶಿ ಹೇಳಿಕೆಯನ್ನು ಖಂಡಿಸಿ, ಉಗ್ರರ ವಿಚಾರವಾಗಿ ಕಾಂಗ್ರೆಸ್ ನಿಲುವೇನು ಎಂದು ಪ್ರಶ್ನಿಸಿದರು.
ಯಾವುದೇ ಭಯೋತ್ಪಾದಕ ಕೃತ್ಯ ನಡೆದರೂ ಕಾಂಗ್ರೆಸ್ ಇದೇ ರೀತಿ ವರ್ತಿಸುತ್ತಿದೆ. ಇದು ಅವರ ಮನಸ್ಥಿತಿ. ಶಾರಿಕ್ ಭಯೋತ್ಪಾದಕ ಅಲ್ಲದಿದ್ದರೆ, ಎನ್ಐಎ ತನಿಖೆ ಯಾಕೆ ಸ್ವೀಕರಿಸುತ್ತಿತ್ತು? ಸರ್ಕಾರ ನಡೆಸಿದವರಿಗೆ ಇದು ಗೊತ್ತಿರಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಚಾರ ಡೈವರ್ಟ್ ಮಾಡುವ ಅಗತ್ಯ ನಮಗಿಲ್ಲ. ಅಲ್ಲದೇ ಶಾರಿಕ್ ವಿಧ್ವಂಸಕ ಕೃತ್ಯಕ್ಕೆ ತಯಾರಾಗಿದ್ದ ಎಂಬುದಕ್ಕೆ ನಮ್ಮಲ್ಲಿ ಸಾಕ್ಷಿಗಳಿವೆ. ಕಾಂಗ್ರೆಸಿಗರಿಗೆ ಹೇಗೆ ಮಾತನಾಡಬೇಕೆಂಬ ಅರಿವಿಲ್ಲ. ಭಾರತ ಮತ್ತು ಚೀನಾ ಗಲಾಟೆಯಲ್ಲೂ ನಮ್ಮ ಯೋಧರ ಮನಸ್ಥಿತಿಯನ್ನು ಕುಗ್ಗಿಸುವ ರೀತಿಯಲ್ಲೇ ಮಾತನಾಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ:ಕುಕ್ಕರ್ ಬ್ಲಾಸ್ಟ್ ಮೂಲಕ ಬಿಜೆಪಿಯಿಂದ ಮತದಾರರ ಮಾಹಿತಿ ಕಳ್ಳತನ ವಿಷಯ ಡೈವರ್ಟ್: ಡಿಕೆಶಿ