ಮಂಡ್ಯ: ಕೆ.ಆರ್.ಪೇಟೆ ತಾಲೂಕಿನಲ್ಲಿ ಕ್ವಾರಂಟೈನ್ ಆದವರಿಗೆ ಚಿಕನ್ ಬಿರಿಯಾನಿ ಹಂಚಿಕೆ ಮಾಡಲಾಗಿದೆ.
ಹೊರ ರಾಜ್ಯಗಳಿಂದ ಹುಟ್ಟೂರಿಗೆ ಆಗಮಿಸಿ ಕೃಷ್ಣರಾಜಪೇಟೆ ತಾಲ್ಲೂಕಿನ ವಿವಿಧ ಸರ್ಕಾರಿ ಸಂಸ್ಥೆಗಳು ಹಾಗೂ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಕ್ವಾರಂಟೈನ್ ಆಗಿರುವ ಒಂದು ಸಾವಿರಕ್ಕೂ ಹೆಚ್ಚಿನ ಮುಂಬೈ ಕನ್ನಡಿಗರಿಗೆ ಸಚಿವ ನಾರಾಯಣಗೌಡ ಅಭಿಮಾನಿಗಳ ಬಳಗದ ವತಿಯಿಂದ ಚಿಕನ್ ಬಿರಿಯಾನಿ ನೀಡಲಾಗಿದೆ.
ಒಂದು ಸಾವಿರಕ್ಕೂ ಹೆಚ್ಚು ಪ್ಯಾಕೆಟ್ಗಳನ್ನು ತಯಾರಿಸಿ, ಮಾದಾಪುರದ ಮೊರಾರ್ಜಿ ದೇಸಾಯಿ ವಸತಿಶಾಲೆ, ಆನೆಗೊಳದ ಸರ್ಕಾರಿ ಪದವಿಪೂರ್ವ ಕಾಲೇಜು, ಸಂತೇಬಾಚಹಳ್ಳಿಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯ, ಕಿಕ್ಕೇರಿಯ ಮೆಟ್ರಿಕ್ ಪೂರ್ವ ಬಾಲಕರ ಹಾಸ್ಟೆಲ್, ಶೆಟ್ಟನಾಯಕನಕೊಪ್ಪಲಿನ ಕಿತ್ತೂರ ರಾಣಿ ಚೆನ್ನಮ್ಮ ವಸತಿಶಾಲೆ, ಗವಿಮಠದ ಮೊರಾರ್ಜಿ ದೇಸಾಯಿ ವಸತಿಶಾಲೆ, ಆದಿಹಳ್ಳಿ ನವೋದಯ ಮಾದರಿ ಅಲ್ಪಸಂಖ್ಯಾತರ ವಸತಿ ಶಾಲೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸ್ಕೂಲ್ ಆಫ್ ಇಂಡಿಯಾ ಶಾಲೆಗಳಲ್ಲಿ ಕ್ವಾರಂಟೈನ್ ಆಗಿರುವ ಮುಂಬೈ ಕನ್ನಡಿಗರಿಗೆ ಬಿರಿಯಾನಿಯನ್ನು ಸರಬರಾಜು ಮಾಡಲಾಯಿತು.
ಇನ್ನು ವಾರದಲ್ಲಿ ಮೂರು ದಿನ ಮೊಟ್ಟೆ, ಹಣ್ಣುಗಳು, ಪರಿಶುದ್ಧವಾದ ಕುಡಿಯುವ ನೀರಿನ ಬಾಟಲ್ಗಳು, ಮಕ್ಕಳಿಗೆ ಶುದ್ಧವಾದ ಕುಡಿಯುವ ಹಾಲು ಸೇರಿದಂತೆ ಚಪಾತಿ, ಮುದ್ದೆ ಮೊದಲಾದ ಪೌಷ್ಟಿಕ ಆಹಾರಗಳನ್ನು ತಾಲ್ಲೂಕು ಆಡಳಿತ ತಯಾರಿಸಿ ದಾನಿಗಳ ನೆರವಿನಿಂದ ವಿತರಿಸಲು ಮುಂದಾಗಿದೆ.