ಮಂಡ್ಯ: ಶ್ರೀರಾಮನ ಕುರಿತು ವಿವಾದಿತ ಹೇಳಿಕೆ ನೀಡಿದ ಪ್ರೊ.ಕೆ.ಎಸ್.ಭಗವಾನ್ ಅವರ ವಿರುದ್ಧ ಹಿಂದೂ ಸಂಘಟನೆಯ ಕಾರ್ಯಕರ್ತರು ಶ್ರೀರಂಗಪಟ್ಟಣ ಪೊಲೀಸರಿಗೆ ದೂರು ನೀಡಿದ್ದಾರೆ. ಇತ್ತೀಚಿಗೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಗವಾನ್ ಅವರು, ಶ್ರೀರಾಮನ ಬಗ್ಗೆ ನೀಡಿರುವ ಹೇಳಿಕೆ ವಿವಾದಕ್ಕೆ ಗುರಿಯಾಗಿತ್ತು.
"ಭಗವಾನ್ ಅವರು ಶ್ರೀರಾಮಚಂದ್ರರ ಕುರಿತು ಅವಹೇಳನಕಾರಿಯಾಗಿ ಮಾತನಾಡಿ ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ. ನಮ್ಮ ಧರ್ಮಕ್ಕೆ ಅವಮಾನ ಮಾಡಿ, ಸಮಾಜದಲ್ಲಿ ಸ್ವಾಸ್ಥ್ಯ ಕದಡುವ ರೀತಿ ಹೇಳಿಕೆ ನೀಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿ, ನ್ಯಾಯ ಕೊಡಿಸಬೇಕು" ಎಂದು ಭಗವಾನ್ ವಿರುದ್ಧ ನೀಡಿರುವ ದೂರಿನಲ್ಲಿ ಹಿಂದೂ ಕಾರ್ಯಕರ್ತರು ಮನವಿ ಮಾಡಿದ್ದಾರೆ.
"ಶ್ರೀರಾಮ ಹಾಗೂ ಸೀತೆಯ ವಿರುದ್ಧ ಭಗವಾನ್ ನೀಡಿರುವ ವಿವಾದಾತ್ಮಕ ಹೇಳಿಕೆ ಸತ್ಯಕ್ಕೆ ದೂರವಾದದ್ದು. ಈ ರೀತಿಯಾದ ಯಾವ ಅಂಶವು ಭಗವದ್ಗೀತೆಯಲ್ಲಿ ಇಲ್ಲ. ಇದು ಸಮಾಜದಲ್ಲಿ ಶಾಂತಿ ಕದಡಲು ಹೇಳಿರುವ ಹೇಳಿಕೆಯಾಗಿದೆ" ಎಂದು ಹಿಂದೂ ಸಂಘಟನೆಯ ಕಾರ್ಯಕರ್ತರು ದೂರಿದ್ದಾರೆ.
ಶ್ರೀರಾಮನನ್ನು ನಾವು ದೇವರಂತೆ ಹಳ್ಳಿ ಹಳ್ಳಿಯಲ್ಲಿ ಪೂಜಿಸುತ್ತೇವೆ. ಆದ್ರೆ ಅವರ ಬಗ್ಗೆ ಭಗವಾನ್ ಬಾಯಿಗೆ ಬಂದಂತೆ ಮಾತಾಡ್ತಾರೆ. ಶ್ರೀರಾಮನ ಬಗ್ಗೆ ಮತ್ತು ಹಿಂದೂ ಧರ್ಮದ ಬಗ್ಗೆ ಹೀಗೆ ಮಾತಾಡ್ತಿದ್ರೆ ನಿಮ್ಮನ್ನು ನೋಡಿಕೊಳ್ತೀವಿ ಎಂದು ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಎಚ್ಚರಿಕೆ ನೀಡಿದೆ. ನಮ್ಮ ಜಿಲ್ಲೆಯಲ್ಲಿ ಭಗವಾನ್ ಹೇಳಿಕೆ ನೀಡಿದ್ದರಿಂದ ಶ್ರೀರಂಗಪಟ್ಟಣದಲ್ಲಿ ದೂರು ಕೊಟ್ಟಿದ್ದೇವೆ. ಪೊಲೀಸ್ನವರು ಇಲ್ಲಿ ಅಲ್ಲಿ ಅನ್ನದೇ ಎಫ್ಐಆರ್ ದಾಖಲಿಸಿಕೊಂಡು ಕೂಡಲೇ ಬಂಧಿಸಬೇಕೆಂದು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಮನವಿ ಮಾಡಿದ್ದಾರೆ.
ಭಗವಾನ್ ಹೇಳಿದ್ದೇನು?: "ಯಾರೋ ಸೀತೆಯ ಮೇಲೆ ಅಪವಾದ ಮಾಡಿದರು ಎಂಬ ಕಾರಣಕ್ಕೆ ಗರ್ಭಿಣಿಯಾಗಿದ್ದ ಸೀತೆಯನ್ನೇ ರಾಮ ಕಾಡಿಗೆ ಕಳುಹಿಸಿದರು. ಸಮರ್ಥಿಸಿಕೊಳ್ಳಲು ಸೀತೆಗೆ ಯಾವುದೇ ಅವಕಾಶ ಕೊಡದೇ ಕಾಡಿಗೆ ಬಿಟ್ಟರು. ಕಾಡಲ್ಲಿ ವಾಲ್ಮಿಕಿ ಸಿಗದೇ ಇದ್ದರೆ ಗರ್ಭಿಣಿ ಸೀತೆಯ ಕಥೆ ಏನಾಗುತ್ತಿತ್ತು?, ಕಾಡಿಗೆ ಕಳುಹಿಸಿದ ನಂತರ ಸುಮಾರು 16-17 ವರ್ಷ ಸೀತೆ ಏನಾದಳು ಎಂಬುದರ ಬಗ್ಗೆ ರಾಮ ವಿಚಾರಿಸಲೇ ಇಲ್ಲ" ಎಂದು ಕೆ.ಆರ್.ಪೇಟೆಯಲ್ಲಿ ಇತ್ತೀಚೆಗೆ ಭಗವಾನ್ ಹೇಳಿದ್ದರು.
"ಸೀತೆಯ ಜೊತೆ ರಾಮ ಕುಳಿತು ಮಧ್ಯಾಹ್ನ ಮದ್ಯ ಸೇವಿಸುತ್ತಾನೆ ಎಂದು ವಾಲ್ಮೀಕಿಯ ರಾಮಾಯಣ ಹೇಳುತ್ತದೆ. ಭಗವಂತ ರಾಮ ಆದರ್ಶ ಅಲ್ಲ, ಏಕೆಂದರೆ ತನ್ನ ಹೆಂಡತಿಯನ್ನು ಕಾಡಿಗೆ ಕಳುಹಿಸಿ ಆ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ ಮತ್ತು ಮರದ ಕೆಳಗೆ ತಪಸ್ಸಿಗೆ ಕುಳಿತಿದ್ದ ಶೂದ್ರನ ತಲೆಯನ್ನೂ ಕತ್ತರಿಸಿದ್ದ" ಎಂದು ಭಗವಾನ್ ವಿವಾದ ಹುಟ್ಟು ಹಾಕಿದ್ದರು.
ಇದನ್ನೂ ಓದಿ: ಟಿಪ್ಪು ಕನ್ನಂಬಾಡಿ ನಿರ್ಮಿಸಿದ್ದರೆ ಕಾವೇರಿ ನೀರಿಗಾಗಿ ಗಲಾಟೆ ನಡೆಯುತ್ತಲೇ ಇರಲಿಲ್ಲ: ಭಗವಾನ್