ಮಂಡ್ಯ : ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯ ತೂಬಿನಕೆರೆ ಹಾಗೂ ನಗುವನಹಳ್ಳಿ ಬಳಿ ನಡೆದ ಎರಡು ಪ್ರತ್ಯೇಕ ಅಪಘಾತದಲ್ಲಿ ಒಬ್ಬ ಮಹಿಳೆ ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ತೂಬಿನಕೆರೆ ಬಳಿಯ ಅಪಘಾತದಲ್ಲಿ ಮೈಸೂರಿನ ವೆಂಕಟಮ್ಮ (85) ಸಾವನ್ನಪ್ಪಿದ್ದಾರೆ. ವೆಂಕಟಮ್ಮ ಅವರ ಪುತ್ರಿ ಸುಧಾಮಣಿ (42) ಹಾಗೂ ಅಳಿಯ ವೆಂಕಟೇಶ್ (45) ತೀವ್ರವಾಗಿ ಗಾಯಗೊಂಡಿದ್ದಾರೆ.
ಮೈಸೂರಿನ ನಿವಾಸಿಗಳು ಬೆಂಗಳೂರಿನಿಂದ ತೆರಳುತ್ತಿದ್ದಾಗ ಮಾರುತಿ ಆಲ್ಟೋ ಕೆ 10 ಕಾರಿನ ಚಕ್ರ ಸಿಡಿದು ಎದುರಿನ ರಸ್ತೆಗೆ ಬಿದ್ದು ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ಹೊರಗೆ ಬಿದ್ದಿದ್ದಾರೆ. ವೆಂಕಟಮ್ಮ ಅವರ ತಲೆಗೆ ತೀವ್ರ ಪೆಟ್ಟು ಬಿದ್ದು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅಸುನೀಗಿದ್ದಾರೆ. ಘಟನೆ ಕುರಿತಂತೆ ಮಂಡ್ಯ ಸಂಚಾರಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಚಾಲಕನ ನಿಯಂತ್ರಣ ತಪ್ಪಿ ಅಪಘಾತ: ಹೆದ್ದಾರಿ ಪರಿಮಿತಿಯ ನಗುವನಹಳ್ಳಿಯ ಬಳಿ ಕಾರು ಮಗುಚಿ ಸಂಭವಿಸಿದ ಅಪಘಾತದಲ್ಲಿ ಪ್ರಯಾಣಿಕರಿಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಕುರಿತು ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಎರಡು ಪ್ರಕರಣಗಳಲ್ಲಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಸ್ ಡಿಕ್ಕಿ, ಪರೀಕ್ಷೆಗೆ ತೆರಳುತ್ತಿದ್ದ ವಿದ್ಯಾರ್ಥಿ ಮೃತ: ಇನ್ನೊಂದೆಡೆ ರಾಮನಗರದಲ್ಲಿ ಪರೀಕ್ಷೆ ಬರೆಯಲು ತನ್ನ ಗೆಳೆಯನೊಂದಿಗೆ ಬೈಕ್ನಲ್ಲಿ ಬರುತ್ತಿದ್ದ ವೇಳೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದು ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ನಡೆಸಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಸಿಇಒ, ಎಂಡಿ ಜೋಡಿ ಕೊಲೆ ಪ್ರಕರಣ: ಮೂವರು ಆರೋಪಿಗಳ ಬಂಧನ
ಐಟಿಐ ಪರೀಕ್ಷೆ ಬರೆಯಲು ಬರುತ್ತಿದ್ದ ವೇಳೆ ಅವಘಡ: ಸ್ಥಳದಲ್ಲೇ ಒಬ್ಬ ವಿದ್ಯಾರ್ಥಿ ಮೃತಪಟ್ಟರೆ, ಇನ್ನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಾಗಡಿ ರಾಮನಗರ ಮುಖ್ಯ ರಸ್ತೆಯ ಜೋಡಗಟ್ಟೆ ಕಾಡಿನ ಬಳಿ ಇಂದು ನಡೆದಿದೆ. ಮೃತ ವಿದ್ಯಾರ್ಥಿ ಮಾಗಡಿಗೆ ಇನ್ನೋರ್ವ ವಿದ್ಯಾರ್ಥಿಯ ಜೊತೆ ಬೈಕ್ನಲ್ಲಿ ಐಟಿಐ ಪರೀಕ್ಷೆ ಬರೆಯಲು ಬರುತ್ತಿದ್ದ ಎಂಬುದಾಗಿ ತಿಳಿದು ಬಂದಿದೆ.
ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು : ಈ ವೇಳೆ, ಎದುರಿನಿಂದ ಬಂದ ಸರ್ಕಾರಿ ಬಸ್ ಡಿಕ್ಕಿ ಹೊಡೆದು ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮತ್ತೋರ್ವ ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿಯನ್ನು ಮಾಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕ್ರೂಸರ್ ವಾಹನ ಪಲ್ಟಿಯಾಗಿ ಇಬ್ಬರು ಸಾವು, ಇನ್ನಿಬ್ಬರು ಗಂಭೀರ : ಇನ್ನೊಂದೆಡೆ ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್ ವಾಹನ ಪಲ್ಟಿಯಾಗಿ ಇಬ್ಬರು ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಸಮೀಪದ ಬೈರವಾಡಿ ಕ್ರಾಸ್ ಬಳಿ ಭಾನುವಾರ (ಜುಲೈ 10-2023)ರಂದು ಸಂಭವಿಸಿತ್ತು. ವಿಜಯಪುರದಿಂದ ಬಿಂಜಲಭಾವಿ ಗ್ರಾಮಕ್ಕೆ ಬಿಂಜಲಭಾವಿ ಗ್ರಾಮದ 12 ಜನರು ಖಾಸಗಿ ಕಾರ್ಯಕ್ರಮಕ್ಕೆ ಕ್ರೂಸರ್ ಮೂಲಕ ತೆರಳುತ್ತಿದ್ದರು ಎಂಬುದಾಗಿ ತಿಳಿದು ಬಂದಿತ್ತು. ಬೈರವಾಡಿ ಕ್ರಾಸ್ ಬಳಿ ವಾಹನ ಕಂದಕಕ್ಕೆ ಬಿದ್ದಿತ್ತು.
ಇದನ್ನೂ ಓದಿ: ಹಳೇ ದ್ವೇಷದ ಹಿನ್ನೆಲೆ ಚಾಕು ಇರಿತ: ಚಿಕಿತ್ಸೆ ಫಲಿಸದೇ ಯುವಕ ಸಾವು, ಎರಡು ಗಂಟೆಯಲ್ಲಿಯೇ ಆರೋಪಿಗಳ ಬಂಧನ