ಮಂಡ್ಯ: ರಾಜ್ಯ ಸರ್ಕಾರ ನಿರುದ್ಯೋಗಿಗಳಿಗೆ ಸದ್ದಿಲ್ಲದೇ ಕಾರ್ಯಕ್ರಮವೊಂದನ್ನು ರೂಪಿಸಿದೆ. 36 ವರ್ಷದ ಒಳಗಿನ ನಿರುದ್ಯೋಗಿಗಳಿಗೆ ಈ ಆಫರ್ ಸಿಗಲಿದ್ದು, ದೇಶದಲ್ಲೇ ಮೊದಲ ಆಧುನಿಕ ತಂತ್ರಜ್ಞಾನದ ಮೂಲಕ ನೀಡುತ್ತಿರುವ ತರಬೇತಿ ಇದಾಗಿದೆ.
ದೇಶದಲ್ಲೇ ಪ್ರಪ್ರಥಮವಾಗಿ ಮಳವಳ್ಳಿ ಪಟ್ಟಣದಲ್ಲಿ ಮೋಷನ್ ಬೇಸಡ್ ಬಸ್ ಸಿಮ್ಯುಲೇಟರ್ ಯಂತ್ರದ ಮೂಲಕ ನಿರುದ್ಯೋಗಿ ಯುವಕ-ಯುವತಿಯರಿಗೆ ಭಾರಿ ಮತ್ತು ಲಘು ವಾಹನ ಚಾಲನಾ ತರಬೇತಿ ಪ್ರಾರಂಭವಾಗಿದೆ.
ಈ ಕಲಿಕಾ ಕೇಂದ್ರ ಇದೀಗ ದೇಶದಲ್ಲಿಯೇ ಅತ್ಯುತ್ತಮ ತಂತ್ರಜ್ಞಾನ ಹೊಂದಿರುವ ಹೈಟೆಕ್ ಲಘು ಮತ್ತು ಭಾರಿ ವಾಹನ ಚಾಲನಾ ಕಲಿಕಾ ಕೇಂದ್ರವೆಂದೇ ಪ್ರಸಿದ್ಧಿಯಾಗಿದೆ. ಯಂತ್ರದಲ್ಲಿ ಕುಳಿತು ಕಂಪ್ಯೂಟರ್ ಪರದೆ ಮೂಲಕ ಕಾಣುವ ರಸ್ತೆಯಲ್ಲಿ ವಾಹನ ಚಾಲನೆ ಮಾಡಿ ತರಬೇತಿ ಪಡೆಯಬಹುದು. ಕುಳಿತ ಸ್ಥಳದಲ್ಲಿಯೇ ಭಾರಿ ವಾಹನ ಚಾಲನೆ ಮಾಡಿದ ಅನುಭವ ನೀಡುತ್ತದೆ. ಕಲಿಕಾ ಅಭ್ಯರ್ಥಿಗಳಿಗೆ ಪ್ರಾಥಮಿಕ ಅನುಭವ ನೀಡೋದರ ಜೊತೆ ಅವರಿಗೆ ಒಂದು ರೀತಿಯ ಧೈರ್ಯ ಹುಟ್ಟಿಸಿ ಕಲಿಕೆಗೆ ಸಹಾಯವಾಗುತ್ತಿದೆ.
ಈ ಯಂತ್ರ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ್ದು, ಯಾವುದೇ ಆಧುನಿಕ ಬಸ್ಗಳನ್ನು ಚಲಾಯಿಸುವ ತಂತ್ರಜ್ಞಾನವನ್ನು ಯಂತ್ರದಲ್ಲಿ ಅಳವಡಿಸಲಾಗಿದೆ. ಈ ತರಬೇತಿ ಶಾಲೆಗೆ ಪ್ರವೇಶ ಪಡೆಯಬೇಕಾದರೆ ಕರ್ನಾಟಕ ಮುಖ್ಯಮಂತ್ರಿ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಯೋಜನೆಯಡಿ ಆಯ್ಕೆಯಾದ ಅಭ್ಯರ್ಥಿಗಳಿಗೆ ವಾಹನದ ಚಾಲನೆ ಕಲಿಕೆಯನ್ನು ಹೇಳಿಕೊಡಲಾಗುತ್ತದೆ. ಜೊತೆಗೆ ತರಬೇತಿ ಮುಗಿಸಿದವರಿಗೆ ಚಾಲನಾ ಪರವಾನಗಿಯನ್ನು ಉಚಿತವಾಗಿ ಕೊಡಿಸಲಾಗುತ್ತದೆ. ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ ಸೇರಿದಂತೆ ಸುತ್ತಮುತ್ತಲ ಜಿಲ್ಲೆಯ ನಿರುದ್ಯೋಗಿಗಳಿಗೆ ಇದು ಸಹಾಯವಾಗುತ್ತಿದೆ. ಒಂದು ತಿಂಗಳ ಉಚಿತ ತರಬೇತಿಯ ಜೊತೆಗೆ ಊಟ ವಸತಿ ಸಹ ನೀಡಲಾಗ್ತಿದೆ.
ಈ ಯಂತ್ರದ ಬೆಲೆ 2.80 ಕೋಟಿ ರೂ. ಆಗಿದ್ದು, ಈ ಯಂತ್ರದಲ್ಲಿ ಪ್ರಾಥಮಿಕ ಚಾಲನಾ ತರಬೇತಿ ನೀಡಿ ನಂತರ ನಿಜವಾದ ಬಸ್ನಲ್ಲಿ ಪ್ರಾಯೋಗಿಕ ತರಬೇತಿಗೆ ಕರೆದೊಯ್ಯಲಾಗುತ್ತೆ. ಇಲ್ಲಿ ತರಬೇತಿ ಪಡೆಯಲು ಹೊರ ರಾಜ್ಯದವರು ಮುಂದೆ ಬರ್ತಿದ್ದು, ಇಲ್ಲಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ತಿದ್ದಾರೆ.