ಮಂಡ್ಯ: ಲಾಕ್ಡೌನ್ ಮುಂದುವರೆಯುವ ಸೂಚನೆ ನಡುವೆ ಸರ್ಕಾರ ಜನರಿಗೆ ಕೊಡುವ ಪಡಿತರ ಪಡೆಯಲು ನ್ಯಾಯಬೆಲೆ ಅಂಗಡಿ ಮುಂದೆ ಜನರು ಕ್ಯೂ ನಿಲ್ಲುತ್ತಿರುವುದು ಸಾಮಾನ್ಯ. ಆದರೆ ನಗರದ ಹೊಸಳ್ಳಿಯಲ್ಲಿ ಸಾಮಾಜಿಕ ಅಂತರ ಪಾಲನೆಗಾಗಿ ಅಂಗಡಿ ಮುಂದೆ ಸಾಲಾಗಿ ಹಾಕಿರುವ ಬಾಕ್ಸ್ಗಳಲ್ಲಿ ಚೀಲಗಳನ್ನು ಇಟ್ಟಿರುವ ಸಾಲು ಕಿ.ಮೀ.ವರೆಗೂ ಸಾಗಿದೆ.
ಬೇಗನೇ ರೇಷನ್ ಪಡೆಯುವುದಕ್ಕಾಗಿ ನಗರದ ಹೊಸಳ್ಳಿಯಲ್ಲಿ ಪಡಿತರ ಪಡೆಯಲು ಅಂಗಡಿ ಮುಂದೆ ಜನರು ಮುಂಜಾನೆ ಬಂದು ನಿಂತಿದ್ದರು. ಆದರೆ ಅಂಗಡಿ ಮಾಲೀಕ 9 ಗಂಟೆಗೆ ಅಂಗಡಿ ತೆರೆಯುವ ಬೋರ್ಡ್ ಹಾಕಿದ್ದಾರೆ. ಅಂಗಡಿ ತೆರೆಯದ ಕಾರಣಕ್ಕೆ ಜನರು ತಮ್ಮ ಜಾಗದಲ್ಲಿ ಚೀಲಗಳನ್ನು ಇಟ್ಟು ಹೋಗಿದ್ದಾರೆ. ಬಾಕ್ಸ್ಗಳಲ್ಲಿ ಚೀಲಗಳನ್ನು ಇಟ್ಟಿರುವ ಸಾಲು ಕಿ.ಮೀ.ವರೆಗೂ ಸಾಗಿದೆ. ಪಡಿತರ ಅಂಗಡಿ ಮಾಲೀಕರು ಬೇಗನೇ ಅಂಗಡಿ ತೆರೆದು ಪಡಿತರ ವಿತರಿಸುವಂತೆ ಜನರು ಒತ್ತಾಯಿಸಿದ್ದಾರೆ.
ಲಾಕ್‌ಡೌನ್‌ಗೆ ಕ್ಯಾರೇ ಎನ್ನದ ಜನತೆ:
ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಟಫ್ ರೂಲ್ಸ್ ಜಾರಿ ಮಾಡಿದ್ದರೂ ಸಹ ಜನರು ಮಾತ್ರ ಎಲ್ಲಾ ನಿಯಮ ಗಾಳಿಗೆ ತೂರಿ ವಸ್ತುಗಳ ಖರೀದಿಗೆ ಮುಂದಾಗಿದ್ದಾರೆ. ಜಿಲ್ಲೆಯಲ್ಲಿ ಖಾಸಗಿ ವಾಹನಗಳ ಓಡಾಟದಿಂದ ಟ್ರಾಫಿಕ್ ಜಾಮ್ ಉಂಟಾಗಿದೆ.
ಮಂಡ್ಯದಲ್ಲಿ ದಿನೇ ದಿನೆ ಕೋವಿಡ್ ಸೋಂಕಿತರ ಸಂಖ್ಯೆ ಸಾವಿರ ಗಡಿ ದಾಟುತ್ತಿದೆ. ಆದರೂ ಸಹ ಜಿಲ್ಲಾಡಳಿತ ಸೋಂಕು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಯಾವುದೇ ಒಲವು ತೋರುತ್ತಿಲ್ಲ. ಮೊದಲ ಹಂತದ ಕೋವಿಡ್ ಸಂದರ್ಭದಲ್ಲಿ ಜಿಲ್ಲಾಡಳಿತದ ಉತ್ತಮ ಸ್ಪಂದನೆಯಿಂದಾಗಿ ಕೋವಿಡ್ ನಿಯಂತ್ರಿಸಲು ಸಾಧ್ಯವಾಯಿತು. ಆದರೆ 2ನೇ ಅಲೆಯ ಸಂದರ್ಭದಲ್ಲಿ ಜನರ ನಿರ್ಲಕ್ಷ್ಯದಿಂದಾಗಿ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿದ್ದು, ಸೋಂಕು ನಿಯಂತ್ರಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣವಾಗಿ ಎಡವಿದೆ ಎಂಬ ಆರೋಪ ಕೇಳಿ ಬಂದಿದೆ.