ಮಂಡ್ಯ: ನಗರದ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯ ಆವರಣದಲ್ಲಿ ಮಂಗಳವಾರ ಮುಂಜಾನೆ ಹೆಣ್ಣು ಶಿಶುವನ್ನು ನಾಯಿಗಳು ಕಚ್ಚಿಕೊಂಡು ಓಡಾಡಿರುವ ದೃಶ್ಯ ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ. ಈ ಮಗು ಮಿಮ್ಸ್‌ಗೆ ಸಂಬಂಧಿಸಿದ್ದಲ್ಲ ಎಂದು ಇಲ್ಲಿಯ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಆದ್ರೆ, ಹೆತ್ತವರು ಬೇಡವೆಂದು ಬಿಸಾಡಿ ಹೋಗಿರುವ ಶಂಕೆ ಹುಟ್ಟಿಕೊಂಡಿದೆ.
ಮಿಮ್ಸ್‌ನ 7ನೇ ವಾರ್ಡ್ ಬಳಿ ಹೆಣ್ಣು ಶಿಶುವನ್ನು ಕಚ್ಚಿ ತಿನ್ನುತ್ತಿದ್ದನ್ನು ಕಂಡ ಸಾರ್ವಜನಿಕರು ಕೂಡಲೇ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ನಂತರ ಬಂದ ಸಿಬ್ಬಂದಿ ನಾಯಿಗಳನ್ನು ಓಡಿಸಿ ಮಗುವನ್ನು ರಕ್ಷಣೆ ಮಾಡಿದ್ದಾರೆ. ಆದರೆ, ದುರಾದೃಷ್ಟವಶಾತ್ ಮಗು ಬದುಕುಳಿಯಲಿಲ್ಲ. ನಂತರ ಶವಾಗಾರಕ್ಕೆ ರವಾನಿಸಲಾಯಿತು. ಇತ್ತ ಮಾಹಿತಿ ತಿಳಿದ ಅಧಿಕಾರಿಗಳಿಗೂ ಆತಂಕ ಉಂಟಾಗಿತ್ತು. ಕೂಡಲೇ ಹೆರಿಗೆ ವಿಭಾಗದವರಿಂದ ಮಾಹಿತಿ ಕಲೆಹಾಕಲಾಗಿದೆ. ಅದರಂತೆ ಆ ಮಗು ಮಿಮ್ಸ್‌ಗೆ ಸಂಬಂಧಿಸಿದಲ್ಲ ಎನ್ನುವುದು ಖಚಿತವಾಗುತ್ತಿದ್ದಂತೆ ವೈದ್ಯರು ನಿಟ್ಟುಸಿರು ಬಿಟ್ಟಿದ್ದಾರೆ.
ನಿರ್ದೇಶಕ ಡಾ.ಮಹೇಂದ್ರಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಗು ಎಲ್ಲಿಂದ ಬಂತೆನ್ನುವ ಮಾಹಿತಿ ಕಲೆಹಾಕುವ ಕೆಲಸ ನಡೆಯಿತು. ಅದರಂತೆ ಸೆ.1ರಿಂದ 5ರವರೆಗೆ ನಾಲ್ಕು ನವಜಾತ ಶಿಶು ಮಿಮ್ಸ್‌ನಲ್ಲಿ ಮೃತಪಟ್ಟಿವೆ. ಈ ಪೈಕಿ ಮೂರು ಗಂಡು, ಒಂದು ಹೆಣ್ಣು ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಹೆಣ್ಣು ಮಗುವಿಗೆ ಸಂಬಂಧಿಸಿದಂತೆ ಚನ್ನಪಟ್ಟಣ ಮೂಲದ ದಂಪತಿಯಿಂದ ಮಾಹಿತಿ ಪಡೆಯಲಾಗಿತ್ತು. ಅವರು ಮೃತಪಟ್ಟ ತಮ್ಮ ಮಗುವನ್ನು ಅಂತ್ಯಸಂಸ್ಕಾರ ಮಾಡಿರುವುದಾಗಿ ತಿಳಿಸಿದ್ದಾರೆ. ಆದರೆ, ಇಲ್ಲಿರುವ ಮೃತ ಮಗು ಯಾರದ್ದೆಂದು ತಿಳಿದು ಬಂದಿಲ್ಲ.
ಇನ್ನು, ಪ್ರಕರಣ ಸಂಬಂಧ ಪಶ್ಚಿಮ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಜತೆಗೆ ಕಳೆದ 24 ಗಂಟೆಯ ಸಿಸಿ ಕ್ಯಾಮರಾ ದೃಶ್ಯಾವಳಿಯ ದಾಖಲೆಯನ್ನು ನೀಡಲಾಗಿದೆ.
ಸಾರ್ವಜನಿಕರ ಹಿಡಿಶಾಪ.. ವೈದ್ಯರ ಪ್ರಕಾರ ಒಂದು ದಿನದ ಹಿಂದೆಯಷ್ಟೇ ಮಗು ಹುಟ್ಟಿರಬಹುದೆಂದು ಅಂದಾಜಿಸಲಾಗಿದೆ. ಅಂತೆಯೇ ನೋಡಲು ವಿಕಲಚೇತನ ಎಂಬಂತೆ ಕಾಣುವುದರಿಂದ ಹೆತ್ತವರೇ ಬಿಟ್ಟು ಹೋಗಿದ್ದು, ಅದನ್ನು ನಾಯಿಗಳು ಎಳೆದುಕೊಂಡು ಬಂದಿವೆ ಎನ್ನಲಾಗ್ತಿದೆ. ನಾಯಿಗಳು ಮಗುವಿನ ದೇಹವನ್ನು ಕಚ್ಚಿರುವ ಪರಿಣಾಮ ಸಂಪೂರ್ಣವಾಗಿ ಗಾಯಗಳೇ ಕಾಣುತ್ತಿದ್ದವು. ಇದನ್ನು ಕಂಡು ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
ಇದನ್ನೂ ಓದಿ: ಶಸ್ತ್ರಚಿಕಿತ್ಸೆಗೆ ಅನಸ್ತೇಶಿಯಾ ನೀಡುವಾಗ ಹೃದಯಾಘಾತ: 8 ವರ್ಷದ ಬಾಲಕ ಸಾವು