ಮಂಡ್ಯ: ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಮಂಡ್ಯಕ್ಕೆ ಭೇಟಿ ನೀಡಿದ ಬಿ.ವೈ.ವಿಜಯೇಂದ್ರ ಅವರಿಗೆ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತ ಕೋರಿದರು. ಬೂತ್ ಮಟ್ಟದಿಂದಲೇ ಪಕ್ಷ ಸಂಘಟಿಸುವ ನಿಟ್ಟಿನಲ್ಲಿ ವಿಜಯೇಂದ್ರ, ಕಲ್ಲಹಳ್ಳಿಯಲ್ಲಿಯ ಬೂತ್ ಮಟ್ಟದ ಅಧ್ಯಕ್ಷ ಶ್ರೀನಿವಾಸ್ ನಿವಾಸಕ್ಕೆ ಭೇಟಿ ಕೊಟ್ಟರು. ರಾಜ್ಯಾಧ್ಯಕ್ಷರನ್ನು ಪುಷ್ಪವೃಷ್ಟಿ ಮೂಲಕ ಬರಮಾಡಿಕೊಂಡ ಶ್ರೀನಿವಾಸ್ ಕುಟುಂಬ, ಆರತಿ ಬೆಳಗಿದರು. ಬಳಿಕ ಸಂಜಯ್ ವೃತ್ತದಿಂದ ಬಿಜೆಪಿ ಕಚೇರಿವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ನಡೆಯಿತು. ಕಾರ್ಯಕರ್ತರು ಜೈಕಾರ ಕೂಗಿ ಸಂಭ್ರಮಿಸಿದರು.
ಮಾಧ್ಯಮದವರ ಜೊತೆ ಮಾತನಾಡಿದ ವಿಜಯೇಂದ್ರ, "ಅಧ್ಯಕ್ಷನಾಗಿ ಜವಾಬ್ದಾರಿ ತೆಗೆದುಕೊಂಡ ತಕ್ಷಣ ಬೂತ್ ಅಧ್ಯಕ್ಷರ ಮನೆಗೆ ಭೇಟಿ ನೀಡಿರುವುದು ರಾಷ್ಟ್ರೀಯ ಅಧ್ಯಕ್ಷರಿಗೆ ಕೊಡುವ ಗೌರವವನ್ನು ಬೂತ್ ಅಧ್ಯಕ್ಷರಿಗೂ ಕೊಡಬೇಕು ಎಂಬುದಾಗಿದೆ. ಇಂಥ ಪರಿಪಾಠ ಬಿಜೆಪಿಯಲ್ಲಿ ಮಾತ್ರ ಇದೆ. ಇಡೀ ರಾಜ್ಯದಲ್ಲಿ ಉತ್ಸಾಹದ ವಾತಾವರಣ ಸೃಷ್ಟಿಯಾಗಿದೆ. ಈ ಬಾರಿ 28 ಕ್ಷೇತ್ರವನ್ನು ಮೈತ್ರಿ ಒಕ್ಕೂಟದ ಜೊತೆ ಗೆಲ್ಲುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಪೂರ್ಣ ಶಕ್ತಿ ಕೊಡಲು ಒಮ್ಮತದಿಂದ ನಿರ್ಧಾರ ಮಾಡಿದ್ದೇವೆ".
"ಈಗಾಗಲೇ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ಭ್ರಷ್ಟ ಸರ್ಕಾರ ತಂದಿದ್ದೇವೆ ಎಂದು ಐದಾರು, ತಿಂಗಳಲ್ಲೇ ಜನ ಪರಿತಪಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯನವರಿಗೆ ರೈತರ ಬಗ್ಗೆ ತಾತ್ಸಾರ ಯಾಕೆಂದು ಗೊತ್ತಿಲ್ಲ. ಕೇಂದ್ರ ಸರ್ಕಾರದ ಮೇಲೆ ಬರ ಪರಿಹಾರದ ಬಗ್ಗೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಮಂತ್ರಿಗಳ ಗೂಂಡಾ ಘರ್ಜನೆ ನಡೆಯುತ್ತಿದೆ. ಜಮೀರ್ ಹೇಳಿಕೆ ಜನಪ್ರತಿನಿಧಿಗಳೆಲ್ಲ ತಲೆ ತಗ್ಗಿಸುವಂತದ್ದು. ಸ್ಪೀಕರ್ ಹುದ್ದೆಗೆ ಕೋಮು ಬಣ್ಣ ಹಚ್ಚುವ ಕೆಲಸವಾಗಿದೆ. ಹೀಗಾಗಿ ಜಮೀರ್ ರಾಜೀನಾಮೆ ಪಡೆಯಬೇಕು" ಎಂದು ಆಗ್ರಹಿಸಿದರು.
ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, "ಜೆಡಿಎಸ್ ಎನ್‌ಡಿಎ ತೆಕ್ಕೆಗೆ ಬರಬೇಕು ಎನ್ನುವ ತೀರ್ಮಾನ ನಮ್ಮ ರಾಷ್ಟ್ರೀಯ ನಾಯಕರದ್ದು. ಈ ತೀರ್ಮಾನದ ಬಗ್ಗೆ ರಾಜ್ಯದಲ್ಲಿ ಉತ್ಸಾಹ ಇದೆ. ಇದರ ಪರಿಣಾಮವೇನು ಅಂತಾ ಲೋಕಸಭಾ ಚುನಾವಣೆಯಲ್ಲಿ ಗೊತ್ತಾಗುತ್ತದೆ. ಈ ನಿರ್ಧಾರ ತಳಮಟ್ಟದ ಕಾರ್ಯಕರ್ತರಲ್ಲೂ ಉತ್ಸಾಹ ತಂದಿದೆ ಎಂದು ನಮಗೆ ವಿಶ್ವಾಸ ಇದೆ".
"ಇದರಿಂದ ಬಿಜೆಪಿ ಮತ್ತು ಜೆಡಿಎಸ್ ಹೆಚ್ಚಿನ ಸ್ಥಾನಗಳನ್ನು ಗೆಲ್ಲುತ್ತದೆ. ಬದಲಾದ ರಾಜಕೀಯದಲ್ಲಿ ಎಲ್ಲವನ್ನು ಎಲ್ಲರೂ ಒಪ್ಪುತ್ತಾರೆ. ನಮ್ಮ ಗುರಿ ಲೋಕಸಭಾ ಚುನಾವಣೆ. ಮತ್ತೆ ಮೋದಿಜೀ ಪ್ರಧಾನಿ ಆಗುವುದು. ಮೈತ್ರಿ ವಿಚಾರದಲ್ಲಿ ಯಾರದ್ದು ಅಭ್ಯಂತರ, ತಕರಾರು ಇಲ್ಲ. ಬಿಜೆಪಿ ಮತ್ತು ಜೆಡಿಎಸ್ ಒಟ್ಟಿಗೆ ಕೆಲಸ ಮಾಡುತ್ತದೆ. ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಯನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ. ನಾವು ಮಂಡ್ಯದಲ್ಲಿ ಬಿಜೆಪಿಗೆ ಸಂಘಟನೆ ಹಾಗೂ ನಾಯಕರಿಗೆ ಹೆಚ್ಚು ಶಕ್ತಿ ಕೊಡುತ್ತೇವೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಜನ್ಮ ನೀಡಿದ ಪುಣ್ಯಭೂಮಿ ಮಂಡ್ಯ" ಎಂದು ವಿಜಯೇಂದ್ರ ಹೇಳಿದರು.
ಸರ್ಕಾರದ ಗ್ಯಾರಂಟಿಗಳ ಬಗ್ಗೆ ಬಿಜೆಪಿ ವಿರೋಧದ ವಿಚಾರವಾಗಿ ಮಾತನಾಡಿ, "ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಜನರ ಕಣ್ಣಿಗೆ ಮಣ್ಣೆರಚಿದ್ದಾರೆ. ಮಹಿಳೆಯರಿಗೆ 2 ಸಾವಿರ ರೂ ಕೊಡುತ್ತೇವೆ ಎಂದು ಒಂದು ತಿಂಗಳು ಕೊಟ್ಟಿದ್ದಾರೆ ಅಷ್ಟೇ. ಜನರಿಗೆ ಇವರು ಮೋಸ ಮಾಡುತ್ತಿದ್ದಾರೆ. ಇದು ಅಕ್ಷಮ್ಯ ಅಪರಾಧ. ಜನರಿಗೆ ಭರವಸೆ ಕೊಟ್ಟು ಅರೆಬರೆ ಬೆಂದ ಯೋಜನೆಗಳನ್ನು ಅಲ್ಲಲ್ಲಿಯೇ ಕೈ ಬಿಡುತ್ತಿದ್ದಾರೆ. ಯಾವ ಯೋಜನೆಯೂ ಪೂರ್ಣ ಆಗಿಲ್ಲ" ಎಂದು ಟೀಕಿಸಿದರು.
ಇದನ್ನೂ ಓದಿ: ರಾಜ್ಯಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದ್ದನ್ನ ಪ್ರಶ್ನಿಸಿ ನಾನು ಕೋರ್ಟ್ಗೆ ಹೋಗುತ್ತೇನೆ: ಸಿಎಂ ಇಬ್ರಾಹಿಂ