ಮಂಡ್ಯ: ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಿಲ್ಲಲೇಬೇಕು. ಇದಕ್ಕೆ ಅಧಿಕಾರಿಗಳೇ ಕಾರಣ ಎಂದು ಯುವ ಸಬಲೀಕರಣ ಖಾತೆ ಸಚಿವ ಕೆ.ಸಿ.ನಾರಾಯಣಗೌಡ ಆರೋಪಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಅಧಿಕಾರಿಗಳ ಸಹಕಾರ ಇಲ್ಲದೆ ಅಕ್ರಮ ಗಣಿಗಾರಿಕೆ ನಡೆಯಲು ಸಾಧ್ಯವಿಲ್ಲ. ಅಭಿವೃದ್ದಿ ಕೆಲಸಗಳು ನಡೆಯಬೇಕಾದ್ರೆ ಗಣಿಗಾರಿಕೆ ಬೇಕು. ಆದರೆ ಎಲ್ಲಾ ಕಡೆ ರಾಯಲ್ಟಿ ನೂರಾರು ಕೋಟಿ ಲೆಕ್ಕದಲ್ಲಿ ಬಂದ್ರೆ ನಮ್ಮಲ್ಲಿ ಒಂದೆರಡು ಕೋಟಿ ರೂ. ಲೆಕ್ಕದಲ್ಲಿ ಬರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಕ್ರಮ ಗಣಿಗಾರಿಕೆ ಬಗ್ಗೆ ಪಟ್ಟಿಕೊಡಿ ಎಂದು ಅಧಿಕಾರಿಗಳಿಗೆ ಒಂದು ತಿಂಗಳಿನಿಂದ ಕೇಳುತ್ತಿದ್ದೀನಿ. ಆದರೆ ಇದುವರೆಗೂ ಕೊಟ್ಟಿಲ್ಲ. ಅಕ್ರಮ ಗಣಿಗಾರಿಕೆ ನಿಲ್ಲದಿದ್ದರೆ ನಾನು ಸಂಸದೆ ಸುಮಲತಾರ ಹಾದಿಯಲ್ಲೇ ಹೋರಾಟ ಮಾಡುತ್ತೇನೆ. ಅಗತ್ಯವಿದ್ದರೆ ಸಿಬಿಐ ತನಿಖೆ ನಡೆಸಬೇಕು ಎಂದೇಳುವ ಮೂಲಕ ಸಂಸದೆ ಬೆಂಬಲಕ್ಕೆ ನಾರಾಯಣಗೌಡ ನಿಂತರು.
ಇದನ್ನೂ ಓದಿ: ಸಾಲ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ ಅಂತಾರೆ, ಇಲ್ಲೊಬ್ಬ ಸ್ನೇಹಿತನನ್ನೇ ಕೊಂದುಬಿಟ್ಟ!
ಕನ್ನಂಬಾಡಿ ಅಣೆಕಟ್ಟು ಸುರಕ್ಷಿತವಾಗಿದೆ. ಆ ಬಗ್ಗೆ ಮಾತನಾಡೋದು ಬೇಡ ಎಂದು ಕೇಳಿಕೊಂಡಿದ್ದೀನಿ. ಅಕ್ರಮ ಗಣಿಗಾರಿಕೆ ಪಟ್ಟಿ ಕೊಡದ ಅಧಿಕಾರಿಗೆ ಇಂದೇ ನೋಟಿಸ್ ನೀಡಲು ಡಿಸಿಗೆ ಸೂಚನೆ ನೀಡುತ್ತೇನೆ. ಹಿಂದಿನ ಅಧಿಕಾರಿಯೂ ಅಕ್ರಮ ಗಣಿಗಾರಿಕೆಗೆ ಸಾಥ್ ನೀಡಿ ಹೋದರು. ಇವರು ಈಗ ಅದೇ ಹಾದಿ ಹಿಡಿದಿದ್ದಾರೆ ಅನ್ನೋದಾದ್ರೆ ಅವರಿಗೆ ನೋಟಿಸ್ ಕೊಡಲಾಗುವುದು ಎಂದು ಎಚ್ಚರಿಕೆ ನೀಡಿದರು.