ಮಂಡ್ಯ : ಕೊಟ್ಟ ಸಾಲಕ್ಕೆ ಬಡ್ಡಿ ಕೇಳಲು ಮನೆ ಬಳಿ ಬರುತ್ತಿದ್ದ ಗೆಳೆಯನ ಮೇಲೆ ಅನುಮಾನಿಸಿ ಸಿನಿಮೀಯ ರೀತಿ ಸ್ನೇಹಿತನನ್ನೇ ಕೊಲೆ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಶ್ರೀರಂಗಪಟ್ಟಣ ಪೊಲೀಸರು ಯಶಸ್ವಿಯಾಗಿದ್ದಾರೆ.
ತನ್ನ ಸ್ನೇಹಿತ ನನ್ನ ಪತ್ನಿ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿರಬಹುದು ಎಂದು ಅನುಮಾನಿಸಿ ಕೊಲೆ ಮಾಡಿರುವ ಸತ್ಯಾಂಶ ಪೊಲೀಸರ ತನಿಖೆಯ ಬಳಿಕ ಹೊರ ಬಿದ್ದಿದೆ.
ಮೇ 22ರಂದು ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಹೊಂಗಳ್ಳಿ ಸಮೀಪದ ರಸ್ತೆ ಪಕ್ಕದ ಹಳ್ಳದಲ್ಲಿ ವ್ಯಕ್ತಿಯೊಬ್ಬನ ಶವ ಹಾಗೂ ಆತನ ಬೈಕ್ ಪತ್ತೆಯಾಗಿತ್ತು.
ನೋಡಿದವರಿಗೆ ಅಪಘಾತವೆಂಬಂತೆ ಕಾಣುತ್ತಿತ್ತಾದರೂ, ಪ್ರಕರಣ ದಾಖಲಿಸಿಕೊಂಡಿದ್ದ ಕೆ.ಆರ್.ಎಸ್ ಠಾಣೆ ಪೊಲೀಸರಿಗೆ ರಸ್ತೆ ಮೇಲಿದ್ದ ರಕ್ತದ ಕಲೆ ಹಾಗೂ ಶವ ಬಿದ್ದಿದ್ದ ಸ್ಥಿತಿ ನೋಡುತ್ತಿದ್ದಂತೆ ಅಪಘಾತವಲ್ಲ, ಇದು ಕೊಲೆ ಎಂಬ ಅನುಮಾನ ಬಂದಿತ್ತು.
ಮೃತಪಟ್ಟ ವ್ಯಕ್ತಿ ಹೊಂಗಳ್ಳಿ ಗ್ರಾಮದ ಅಶೋಕ್ ಎಂಬುದು ತಿಳಿಯುತ್ತಿದ್ದಂತೆ ತನಿಖೆ ಆರಂಭಿಸಿದ ಪೊಲೀಸರು, ಚಂದ್ರ ಹಾಗೂ ಶ್ರೀಧರ ಇಬ್ಬರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದರು.
ಆರಂಭದಲ್ಲಿ ಕೊಲೆಗೂ ತಮಗೂ ಸಂಬಂಧವಿಲ್ಲ ಎನ್ನುತ್ತಿದ್ದ ಆರೋಪಿಗಳು, ಕೊನೆಗೆ ತಪ್ಪು ಒಪ್ಪಿಕೊಂಡು ತಾವೇ ಕೊಲೆ ಮಾಡಿದ್ದಾಗಿ ಹೇಳಿದ್ದಾರೆ.
ಆರೋಪಿಗಳು ಹಾಗೂ ಕೊಲೆಯಾದ ಅಶೋಕ್ ಮೂವರೂ ಹೊಂಗಳ್ಳಿ ಗ್ರಾಮದವರು. ಕಷ್ಟ-ಸುಖದಲ್ಲಿ ಒಬ್ಬರಿಗೊಬ್ಬರು ನೆರವಿಗೆ ಬರುತ್ತಿದ್ದ ಸ್ನೇಹಿತರು. ಮೃತ ಅಶೋಕ್ ಬಳಿ ಚಂದ್ರ 50 ಸಾವಿರ ರೂ. ಸಾಲ ಪಡೆದಿದ್ದ.
ಸರಿಯಾಗಿ ಬಡ್ಡಿ ಕಟ್ಟದಿದ್ದಾಗ ಪದೇಪದೆ ಮನೆಗೆ ಹೋಗಿ ತನ್ನ ಹಣ ಹಿಂದಿರುಗಿಸುವಂತೆ ಒತ್ತಡ ಹಾಕುತ್ತಿದ್ದ. ಅಶೋಕ ಮನೆಗೆ ಬರುವುದರಿಂದ ತನ್ನ ಪತ್ನಿ ಜೊತೆ ಅನೈತಿಕ ಸಂಬಂಧ ಹೊಂದಿರಬಹುದು ಎಂದು ಆರೋಪಿ ಚಂದ್ರು ಶಂಕಿಸಿದ್ದ. ಅದೇ ಕಾರಣಕ್ಕೆ ತನ್ನ ಸ್ನೇಹಿತ ಶ್ರೀಧರ್ ಜೊತೆ ಸೇರಿ ಮೇ 21ರ ರಾತ್ರಿ ಕೊಲೆ ಮಾಡಿದ್ದಾನೆ.
ಕೊಲೆಗೂ ಮುನ್ನ ಮೃತ ಅಶೋಕ್, ಆರೋಪಿಗಳಾದ ಚಂದ್ರ ಹಾಗೂ ಶ್ರೀಧರ್ ಕೆಲವು ಸ್ನೇಹಿತರೊಂದಿಗೆ ಎಣ್ಣೆ ಪಾರ್ಟಿ ಮಾಡಿದ್ದರು. ಬಳಿಕ ಅಲ್ಲಿಂದ ಹೊರಟ್ಟಿದ್ದ ಅಶೋಕ ಪಂಪ್ ಹೌಸ್ನಲ್ಲಿ ಇನ್ನೊಬ್ಬ ಸ್ನೇಹಿತ ಉಮೇಶ್ ಜೊತೆ ಮಲಗಿದ್ದಾಗ ಅಲ್ಲಿಗೆ ಬಂದ ಆರೋಪಿಗಳು, ಜಗಳ ತೆಗೆದು ಹಲ್ಲೆ ನಡೆಸಿ, ಕೊನೆಗೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೈದಿದ್ದರು.
ಬಳಿಕ ಬೈಕ್ ಜೊತೆ ಶವವನ್ನು ರಸ್ತೆ ಪಕ್ಕದ ಹಳ್ಳಕ್ಕೆ ತಳ್ಳಿ ಅಪಘಾತದಿಂದ ಮೃತಪಟ್ಟಿದ್ದಾನೆ ಎಂದು ಬಿಂಬಿಸಲು ಯತ್ನಿಸಿದ್ದರು. ಆದರೆ, ಪೊಲೀಸರು ಪ್ರಕರಣ ಬೇಧಿಸಿದ್ದು, ಕೊನೆಗೂ ಸಿಕ್ಕಿಬಿದ್ದಿದ್ದಾರೆ.