ಮಂಡ್ಯ: ಅಳಿಯನ ವಿರುದ್ಧ ಸುಪಾರಿ ಕೊಟ್ಟ ದಂಪತಿಯನ್ನೇ ದೋಚಿ ದರೋಡೆಕೋರರು ಪೊಲೀಸರ ಅತಿಥಿಯಾದ ಘಟನೆ ಮಳವಳ್ಳಿಯಲ್ಲಿ ನಡೆದಿದೆ. ದರೋಡೆಕೋರರ ವಿರುದ್ಧ ದೂರು ನೀಡಿದ ದಂಪತಿಯೂ ಈಗ ಕಂಬಿ ಹಿಂದೆ ಸೇರಿದ್ದಾರೆ.
ಸುಪಾರಿ ಪಡೆದಿದ್ದ ಬೆಂಗಳೂರು ಮೂಲದ ಮಹದೇವ, ಕುಮಾರ, ಲೋಕೇಶ್, ಮೋಹನ್, ಲೋಕೇಶ್ ಬಂಧಿತ ದರೋಡೆಕೋರರಾಗಿದ್ದು, ಇವರ ಜೊತೆ ಸುಪಾರಿ ಕೊಟ್ಟ ಆರೋಪದಡಿ ವೆಂಕಟೇಶ್ ಮತ್ತು ಪುಟ್ಟತಾಯಮ್ಮ ಜೈಲು ಸೇರಿದ್ದಾರೆ. ಮಳವಳ್ಳಿ ಪಟ್ಟಣದಲ್ಲಿ ವ್ಯಾಪಾರ ಮಾಡಿಕೊಂಡಿದ್ದ ಪುಟ್ಟತಾಯಮ್ಮ ಪುತ್ರಿ ಅನ್ಯ ಜಾತಿ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಳು. ಇದರಿಂದ ಕೋಪಗೊಂಡಿದ್ದ ದಂಪತಿ ಅಳಿಯನ ಕೊಲೆಗೆ ಸುಪಾರಿ ಕೊಟ್ಟು ಅರ್ಧ ಅಡ್ವಾನ್ಸ್ ನೀಡಿದ್ದರು.
ಆದರೆ ಮತ್ತೆ ಹಣಕ್ಕೆ ಬೇಡಿಕೆ ಇಟ್ಟ ಸುಪಾರಿ ತಂಡ ದಂಪತಿಯನ್ನೇ ಬೆದರಿಸಿ ದರೋಡೆ ಮಾಡಿದ್ದರು. ಪ್ರಕರಣ ಸಂಬಂಧ ದಂಪತಿ ಮಳವಳ್ಳಿ ಪೊಲೀಸರ ಮೊರೆ ಹೋಗಿದ್ದರು. ಆರೋಪಿಗಳನ್ನು ಬಂಧಿಸಿ ವಿಚಾರಣೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ವಿಚಾರ ತಿಳಿದ ಪೊಲೀಸರು ಆರೋಪಿಗಳ ಜೊತೆ ದಂಪತಿಯನ್ನೂ ಜೈಲಿಗೆ ಕಳುಹಿಸಿದ್ದಾರೆ.