ಮಂಡ್ಯ: ಯುವಕರಿಗೆ ಮಹಿಳೆಯನ್ನು ಪರಿಚಯಿಸಿ ಹನಿಟ್ರ್ಯಾಪ್ ಮಾಡ್ತಿದ್ದ ಖದೀಮರನ್ನು ಖೆಡ್ಡಾಕ್ಕೆ ಕೆಡವುವಲ್ಲಿ ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ನಗರದ ರವಿಚಂದ್ರ (ಅಲಿಯಾಸ್ ನಾಯಿ ರವಿ), ಕಾರ್ತಿಕ್, ಕಿರಣ್ ಹಾಗೂ ಚನ್ನಪಟ್ಟಣ ಮೂಲದ ಮಂಜು ಬಂಧಿತ ಆರೋಪಿಗಳು.
ಇತ್ತೀಚೆಗೆ ಗಿರೀಶ್ ಎಂಬ ಯುವಕನನ್ನು ಪರಿಚಯಿಸಿಕೊಂಡ ಈ ಗುಂಪು, ಮಹಿಳೆಯ ಮೂಲಕ ವಾಟ್ಸಾಪ್ ಚಾಟ್ ಹಾಗೂ ದೂರವಾಣಿ ಕರೆ ಮಾಡುವ ಮೂಲಕ ಹತ್ತಿರವಾಗಿದ್ದರು. ನಂತರ ಈ ಮಹಿಳೆ ನಿರ್ಜನ ಪ್ರದೇಶಕ್ಕೆ ಗಿರೀಶ್‌ನನ್ನು ಕರೆಸಿಕೊಂಡು, ಮೊದಲೇ ಮಾಡಿರುವ ಪ್ಲಾನ್‌ನಂತೆ ನಾಲ್ವರನ್ನು ಕೂಡಾ ಸ್ಥಳಕ್ಕೆ ಕರೆಸಿಕೊಂಡಿದ್ದಳು. ನಂತರ ಈ ತಂಡ ಗಿರೀಶ್ ಮೇಲೆ ಹಲ್ಲೆ ನಡೆಸಿ ಹಣ ದೋಚಿದೆ.
ಕಾರ್ ಶೋ ರೂಂನಲ್ಲಿ ಕೆಲಸ ಮಾಡ್ತಿದ್ದ ಗಿರೀಶ್ ಎಂಬುವನ ಸ್ನೇಹ ಬೆಳೆಸಿದ್ದ ಮಹಿಳೆ ಜುಲೈ 22ರ ರಾತ್ರಿ ಹೊರಗಡೆ ಸುತ್ತಾಡಿಕೊಂಡು ಬರೋಣ ಎಂದು ಪುಸಲಾಯಿಸಿದ್ದಾಳೆ. ಈ ಸಂದರ್ಭದಲ್ಲಿ ಗಿರೀಶ್‌ನನ್ನ ಕರೆದುಕೊಂಡು, ಕೊತ್ತತ್ತಿ ಗ್ರಾಮದ ಜ್ವಾಲಾಮುಖಿ ದೇವಾಲಯ ಬಳಿ ಹೋದ ವೇಳೆ ಅಪರಿಚಿತರಂತೆ ಬಂದ ನಾಲ್ವರು ಹಲ್ಲೆ ನಡೆಸಿದ್ದಾರೆ. ನಂತರ ಗಿರೀಶ್ ಬಳಿ ಇದ್ದ 30 ಸಾವಿರ ನಗದು, ಮೊಬೈಲ್ ಪಡೆದು ನಂತರ ಹಲ್ಲೆ ನಡೆಸಿ ಪರಾರಿಯಾಗಿದ್ದರು.
ಆ ಮಹಿಳೆ ಕೂಡ ಹಲ್ಲೆ ಬಳಿಕ ದರೋಡೆಕೋರರ ಜೊತೆ ಎಸ್ಕೇಪ್ ಆಗಿದ್ದನ್ನು ಕಂಡು ಗಿರೀಶ್, ಮಂಡ್ಯ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಖದೀಮರಿಗೆ ಬಲೆ ಬೀಸಿದ್ದರು. ಸದ್ಯ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.