ಮೈಸೂರು: ದಸರಾ ಜಂಬೂಸವಾರಿ ದಿನ ಚಿನ್ನದ ಅಂಬಾರಿ ಹೊತ್ತು ಸಾಗುವ ಗಜಪಡೆಗೆ ನಿತ್ಯ ಅರಮನೆಯಿಂದ ಬನ್ನಿಮಂಟಪದವರೆಗೆ ಸುಮಾರು 5 ಕಿಲೋಮೀಟರ್ವರೆಗೆ ತಾಲೀಮು ನಡೆಸುತ್ತಾರೆ. ತಾಲೀಮು ನಡೆಸುವ ವೇಳೆ ಅರ್ಜುನ ಹೆಸರಿನ ಆನೆ ಮದವೇರಿ ರಸ್ತೆಗೆ ಅಡ್ಡಲಾಗಿ ನಿಂತುಬಿಟ್ಟಿತ್ತು. ಆಗ ಹೆಣ್ಣು ಆನೆ ಬಂದು ಸಮಾಧಾನ ಮಾಡಿದ ಮೇಲೆ ಅರ್ಜುನನ ತಾಲೀಮು ಮುಂದುವರೆಯಿತು.
ಈ ಗಜಪಡೆ ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ ಹಾಗೂ ಬಂಬೂಬಜಾರ್ ರಸ್ತೆಯಲ್ಲಿ ಸಾಗುತ್ತಿದ್ದಂತೆ ಅಲ್ಲಿದ್ದ ಜನರು ಗಜಪಡೆಯ ಮುಂದೆ ನಿಂತು ಸೆಲ್ಫಿ ತೆಗೆದುಕೊಳ್ಳಲು ಮುಗಿ ಬಿದ್ದರು. ಜಂಬೂಸವಾರಿಯ ದಿನ ಚಿನ್ನದ ಅಂಬಾರಿ ಹೊತ್ತು ಸಾಗುವ ಅರ್ಜುನನಿಗೆ ಮರದ ಅಂಬಾರಿಯನ್ನು ಹೊತ್ತು ತಾಲೀಮು ನಡೆಸಿ ಸಿದ್ಧಗೊಳಿಸುವುದು ಪ್ರತಿ ವರ್ಷ ನಡೆದುಕೊಂಡು ಬಂದಿರುವ ಸಂಪ್ರದಾಯ.
ಈ ವೇಳೆ, ಅರ್ಜುನ ಆನೆಗೆ ನಿತ್ಯ ವಿಶೇಷ ಪೌಷ್ಟಿಕ ಆಹಾರ ನೀಡುತ್ತಾರೆ. ಹೀಗಾಗಿ ಅರ್ಜುನ ಆನೆ ಸಯ್ಯಾಜಿರಾವ್ ರಸ್ತೆಯ ದೇವರಾಜ ಮಾರುಕಟ್ಟೆಯ ಬಳಿ ಮದವೇರಿ ರಸ್ತೆಗೆ ಅಡ್ಡಲಾಗಿ ನಿಂತು ಬಿಟ್ಟಿತ್ತು.