ಮಂಡ್ಯ: ರೈತಾಪಿ ವರ್ಗದ ಯುವಕರು ಮದುವೆಯಾಗಲು ಹೆಣ್ಣು ಕೇಳಲು ಹೋದರೆ ಹೆಣ್ಣೆತ್ತವರು ಹುಡುಗ ಏನು ಮಾಡ್ಕೊಂಡು ಇದ್ದಾನೆ ಅಂದಾಗ ರೈತನಾಗಿದ್ದಾನೆ ಅಂದರೆ ಸಾಕು ಮೂಗು ಮುರಿಯುತ್ತಾರೆ. ಹೀಗಾಗಿ ಯುವಕರು ಮದುವೆಯಾಗಲು ಕನ್ಯೆ ಸಿಗದೇ ಇದೀಗ ವಧು-ವರರ ಸಮಾವೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬಾಳ ಸಂಗಾತಿಗಾಗಿ ಕ್ಯೂ ನಿಂತಿದ್ದಾರೆ.
ರೈತ ದೇಶದ ಬೆನ್ನೆಲುಬು, ರೈತನಿದ್ದರೆ ಮಾತ್ರ ದೇಶ ಸುಭೀಕ್ಷವಾಗಿ ಇರುತ್ತೆ ಅಂತಾ ಹೇಳುತ್ತಾರೆ. ಆದರೆ ಇದೀಗ ಅಂತಹ ರೈತ ಮದುವೆಯಾಗಲು ಹುಡುಗಿ ಸಿಗುತ್ತಿಲ್ಲ. ಮದುವೆಯಾಗಲು ರೈತ ಹೆಣ್ಣು ಕೇಳಲು ಹೋದರೆ, ಹೆಣ್ಣೆತ್ತವರು ನಾವು ರೈತರಿಗೆ ನಮ್ಮ ಮಗಳನ್ನು ಕೊಡುವುದಿಲ್ಲ. ನಾವು ಪಟ್ಟಣದಲ್ಲಿ ಕೆಲಸದಲ್ಲಿ ಇರುವವರಿಗೆ ನಮ್ಮ ಮಗಳನ್ನು ಕೊಡುತ್ತೇವೆ ಎನ್ನುವವರ ಸಂಖ್ಯೆಯೇ ಹೆಚ್ಚಾಗಿದೆ. ಹೀಗಾಗಿ ರೈತ ಯುವಕರು ದಾಂಪತ್ಯ ಜೀವನ ತುಳಿಯಲು ಹುಡುಗಿ ಸಿಗದೇ ಮಂಡ್ಯ ಜಿಲ್ಲೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪರದಾಡುತ್ತಿದ್ದಾರೆ.
ಇದಕ್ಕೆ ತಾಜಾ ಉದಾಹರಣೆಗೆ ಎಂದರೆ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ನಡೆದ ಒಕ್ಕಲಿಗ ವಧು-ವರ ಸಮಾವೇಶ ಭಾನುವಾರ ಆದಿಚುಂಚನಗಿರಿಯಲ್ಲಿ ಸಮಾವೇಶ ಜರುಗಿತು. ಮಂಡ್ಯ ಜಿಲ್ಲೆ ಸೇರಿದಂತೆ ರಾಜ್ಯದ ನಾನ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ವಧು-ವರರ ಆಯ್ಕೆಗೆ ಬಂದಿದ್ದಾರೆ.
ಸುಮಾರು 12 ಸಾವಿರ ಮಂದಿ ಸಮಾವೇಶದಲ್ಲಿ ನೋಂದಣಿ ಆಗಿದ್ದು, ಈ ಪೈಕಿ 250 ಮಂದಿ ಹುಡುಗಿಯರು ವರನಿಗಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಉಳಿದ 11,750 ಮಂದಿ ಯುವಕರು ದಾಂಪತ್ಯ ಜೀವನಕ್ಕೆ ಕಾಲಿಡಲು ವಧುವಿಗಾಗಿ ಹುಡುಕಾಟ ನಡೆಸಲು ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ ಅತೀ ಹೆಚ್ಚು ರೈತ ಸಮುದಾಯದ ಯುವಕರೇ ಇರುವುದು ಆಶ್ಚರ್ಯದ ಸಂಗತಿಯಾಗಿದೆ.
ಇದನ್ನೂ ಓದಿ : 40 ದಿನ, 32 ಲಕ್ಷ ವಿವಾಹ, 3.75 ಲಕ್ಷ ಕೋಟಿ ರೂಪಾಯಿ ವ್ಯಾಪಾರ! ಭಾರತದಲ್ಲಿ ಭರ್ಜರಿ ಮದುವೆ ಸೀಸನ್