ಮಂಡ್ಯ: ಜನ ಬಯಸಿದರೆ ಮಾತ್ರ ರಾಜಕಾರಣಕ್ಕೆ ಬರುತ್ತೇನೆಯೇ ಹೊರತು ವೈಯಕ್ತಿಕವಾಗಿ ರಾಜಕಾರಣಕ್ಕೆ ಬರಲು ಮನಸ್ಸಿಲ್ಲ ಎಂದು ನಟ ಅಭಿಷೇಕ್ ಅಂಬರೀಶ್ ಹೇಳಿದ್ದಾರೆ. ಮದ್ದೂರು ತಾಲೂಕಿನ ಹುಳಗನಹಳ್ಳಿಯಲ್ಲಿ ತಾಲೂಕಿನ ಕೊರೊನಾ ವಾರಿಯರ್ಸ್, ಕೂಲಿ ಕಾರ್ಮಿಕರಿಗೆ ಕಿಟ್ ವಿತರಿಸಿ ಮಾತನಾಡಿದ ಅವರು, ನನ್ನ ತಾಯಿ ಸುಮಲತಾ ಅಂಬರೀಶ್ ಈಗಾಗಲೇ ರಾಜಕಾರಣದಲ್ಲಿದ್ದು, ಜನಪ್ರತಿನಿಧಿಯಾಗಿ ಮಂಡ್ಯದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಜನರು ಸಹ ಅವರ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ ಎಂದರು.
ರಾಜಕಾರಣಕ್ಕೆ ಬರುವ ಆಸಕ್ತಿ ಇಲ್ಲ
ಸದ್ಯದ ಪರಿಸ್ಥಿತಿಯಲ್ಲಿ ನಾನು ರಾಜಕಾರಣಕ್ಕೆ ಬರುವ ಆಸಕ್ತಿ ಇಲ್ಲ. ನನ್ನ ಆಸೆ ಚಿತ್ರರಂಗದ ಮೇಲೆ ಇದೆ. ಒಂದು ವೇಳೆ ಜಿಲ್ಲೆಯ ಜನತೆ ಮತ್ತು ನನ್ನ ತಂದೆಯ ಅಭಿಮಾನಿಗಳು, ಬೆಂಬಲಿಗರು ಬಯಸಿದಲ್ಲಿ ಮಾತ್ರ ರಾಜಕಾರಣಕ್ಕೆ ಪದಾರ್ಪಣೆ ಮಾಡಬೇಕೆ ಅಥವಾ ಬೇಡವೇ ಎನ್ನುವುದರ ಬಗ್ಗೆ ಆಲೋಚನೆ ಮಾಡಿ ತೀರ್ಮಾನ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದರು.
ಮಂಡ್ಯ ಜಿಲ್ಲೆಯ ಜನರ ಹಿತವನ್ನು ಗುರಿಯಾಗಿಟ್ಟುಕೊಂಡು ಕೆಲಸ ಮಾಡುವ ಜನಪ್ರತಿನಿಧಿಗಳು ಜಿಲ್ಲೆಯ 7 ತಾಲೂಕುಗಳಿಗೆ ಅವಶ್ಯಕತೆ ಇದೆ. ಇಂತಹ ಜನಪ್ರತಿನಿಧಿಗಳ ಅವಶ್ಯಕತೆ ಇಂದು ಹೆಚ್ಚಾಗಿದೆ. ನಾನು ರಾಜಕೀಯ ಪ್ರವೇಶ ಮಾಡುವುದಾದರೆ ನನ್ನ ತಂದೆ ಅಂಬರೀಶ್ ಅವರ ತವರು ಕ್ಷೇತ್ರವಾದ ಮದ್ದೂರಿನಿಂದಲೇ ಪ್ರವೇಶ ಮಾಡುವ ಅಭಿಲಾಷೆ ಹೊಂದಿದ್ದೇನೆ ಎಂದರು.
ಜಿಲ್ಲೆಯ ಜನತೆ ತಕ್ಕ ಉತ್ತರ ನೀಡಿದ್ದಾರೆ
ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಕುರಿತಂತೆ ನನ್ನ ತಾಯಿ ಸಂಸದೆ ಸುಮಲತಾ ಅಂಬರೀಶ್ ಹೋರಾಟ ನಡೆಸುತ್ತಿದ್ದಾರೆ. ಅವರ ವಿರುದ್ಧ ಕೆಲವು ರಾಜಕಾರಣಿಗಳು ಟೀಕೆ ಟಿಪ್ಪಣಿ ಮಾಡುತ್ತಿದ್ದಾರೆ. ಈ ಬಗ್ಗೆ ನಾನು ಈಗಾಗಲೇ ಒಂದು ಬಾರಿ ತಕ್ಕ ಉತ್ತರ ನೀಡಿದ್ದೇನೆ. ಪದೇ ಪದೆ ಈ ವಿಷಯವಾಗಿ ಪ್ರತಿಕ್ರಿಯೆ ನೀಡುವುದಿಲ್ಲ. ಸುಮಲತಾರ ಹೋರಾಟ ಕುರಿತು ವಿರೋಧಿಗಳ ಟೀಕೆ ಟಿಪ್ಪಣಿಗೆ ಜಿಲ್ಲೆಯ ಜನತೆ ತಕ್ಕ ಉತ್ತರ ನೀಡಿದ್ದಾರೆ ಎಂದರು.