ಮಂಡ್ಯ: ಮದ್ದೂರಿನ ಎಟಿಎಂ ಯಂತ್ರವನ್ನು ಕತ್ತರಿಸಿ 20 ಲಕ್ಷಕ್ಕೂ ಹೆಚ್ಚು ಹಣ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು, ಇನ್ನುಳಿದ ನಾಲ್ವರ ಬಂಧನಕ್ಕೆ ಬಲೆ ಬೀಸಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದ ಮೆಡಿಕಲ್ ಸೆಂಟರ್ (ಡಾ.ಸಿದ್ದೇಗೌಡ ನರ್ಸಿಂಗ್ ಹೋಂ) ಬಳಿ ಇರುವ ಎಸ್ಬಿಐ ಎಟಿಎಂ ಕೇಂದ್ರಕ್ಕೆ ಏ.11ರ ತಡರಾತ್ರಿ ನುಗ್ಗಿದ 5 ಮಂದಿ ದರೋಡೆಕೋರರು, ಸಿಸಿ ಕ್ಯಾಮರಾಕ್ಕೆ ಮೊದಲು ಸ್ಪ್ರೇ ಮಾಡಿ ಹಾನಿಗೊಳಿಸಿ ನಂತರ ಎಟಿಎಂ ಯಂತ್ರವನ್ನು ಗ್ಯಾಸ್ ಕಟ್ಟರ್ನಿಂದ ಕತ್ತರಿಸಿ ಅಂದಾಜು 20.60 ಲಕ್ಷ ರೂಪಾಯಿ ಹಣವನ್ನು ತುಂಬಿಕೊಂಡು ಪರಾರಿಯಾಗಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವೇಣುಗೋಪಾಲ್ ನಿರ್ದೇಶನದಂತೆ ಮಳವಳ್ಳಿ ಡಿವೈಎಸ್ಪಿ ಲಕ್ಷ್ಮಿ ನಾರಾಯಣ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಮದ್ದೂರು ಪೊಲೀಸ್ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಕೆ.ಎನ್.ಹರೀಶ್ ನೇತೃತ್ವದ 8 ಮಂದಿ ತಂಡ ರಚಿಸಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಮದ್ದೂರು ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು ಆರೋಪಿಗಳ ಪತ್ತೆಗಾಗಿ ಉತ್ತರಪ್ರದೇಶ ರಾಜ್ಯಕ್ಕೆ ಜಾಡು ಹಿಡಿದು ಹೋಗಿದ್ದರು.
ಸತತ 10 ದಿನಗಳ ಕಾಲ ದೆಹಲಿ, ಉತ್ತರಪ್ರದೇಶ, ಉತ್ತರಾಖಂಡ್ ರಾಜ್ಯಗಳ ವಿವಿಧ ಸ್ಥಳಗಳಲ್ಲಿ ತೀವ್ರ ಶೋಧ ಕಾರ್ಯ ನಡೆಸಿ, ಕೊನೆಗೂ ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ಆರೋಪಿ ದೀಪಕ್ ತೋಮರ್ (29) ಎಂಬಾತನನ್ನು ಬಂಧಿಸಿದ್ದಾರೆ. ಈ ಕುರಿತು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದ್ದು, ಪ್ರಕರಣದಲ್ಲಿ ಇನ್ನೂ ನಾಲ್ವರು ಭಾಗಿಯಾಗಿರುವ ಕುರಿತು ಆರೋಪಿ ಬಾಯಿ ಬಿಟ್ಟಿದ್ದಾನೆ.
ಇದನ್ನೂ ಓದಿ: ಮದ್ದೂರು : ಎಸ್ಬಿಐ ಬ್ಯಾಂಕಿಗೆ ಸೇರಿದ ಎಟಿಎಮ್ಗೆ ಕನ್ನ-20 ಲಕ್ಷ ರೂ. ದೋಚಿದ ಖದೀಮರು!