ಮಂಡ್ಯ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಬೈಕ್ ಸವಾರನ ಸ್ಥಿತಿ ಚಿಂತಾಜನಕವಾಗಿದೆ. ಇತ್ತೀಚೆಗಷ್ಟೇ ಇದೇ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ತಾಯಿ-ಮಗ ಮೃತಪಟ್ಟಿದ್ದರು.
ತಮಿಳುನಾಡು ಮೂಲದ ಪ್ರಿಯಾಂಕ ರಾಜು(32) ಮೃತ ಯುವತಿ. ಹಾಸನದ ದಾಸನಕೊಪ್ಪಲು ನಿವಾಸಿ ಬೈಕ್ ಸವಾರ ಲಕ್ಷ್ಮೀನಾರಾಯಣ ಗೌಡ ಪರಿಸ್ಥಿತಿ ಗಂಭೀರವಾಗಿದೆ. ಮದ್ದೂರು ತಾಲೂಕಿನ ಗೆಜ್ಜಲಗೆರೆ ಬಳಿ ಬೈಕ್ ನಿಯಂತ್ರಣ ತಪ್ಪಿದೆ. ಅಪಘಾತದ ರಭಸಕ್ಕೆ ಸವಾರನ ಕುತ್ತಿಗೆ ಸೀಳಿ, ಎಡಗೈ ತುಂಡಾಗಿದೆ ಎಂದು ತಿಳಿದು ಬಂದಿದೆ. ಇವರಿಬ್ಬರು ಬೆಂಗಳೂರಿನ ಟಿಸಿಎಸ್ ಕಂಪನಿಯಲ್ಲಿ ಸಹೋದ್ಯೋಗಿಗಳು. ಬೈಕ್ನಲ್ಲಿ ಮೈಸೂರು ಪ್ರವಾಸಕ್ಕೆಂದು ಹೋಗಿದ್ದರು. ವಾಪಸ್ ಬೆಂಗಳೂರಿಗೆ ಹೋಗುವಾಗ ಅಪಘಾತ ನಡೆದಿದೆ.
ಇದನ್ನೂ ಓದಿ: ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ದುರಸ್ತಿ ಕಾಮಗಾರಿ: ಸರ್ವಿಸ್ ರಸ್ತೆ ಬಗ್ಗೆ ಅಧಿಕಾರಿ ಮಾಹಿತಿ
ಲಕ್ಷ್ಮೀನಾರಾಯಣ ಗೌಡಗೆ ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರವಾನಿಸಲಾಗಿದೆ. ಕೋಮಾ ಸ್ಥಿತಿಯಲ್ಲಿರುವ ಬೈಕ್ ಸವಾರ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಯುವತಿಯ ಶವವನ್ನು ಮದ್ದೂರು ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಮದ್ದೂರು ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
7 ಮಂದಿ ದುರ್ಮರಣ: ರಾಜಸ್ಥಾನ ಮತ್ತು ಛತ್ತೀಸ್ಗಢದಲ್ಲಿ ಇತ್ತೀಚೆಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಏಳು ಮಂದಿ ಸಾವನ್ನಪ್ಪಿದ್ದರು. ರಾಜಸ್ಥಾನದ ಹನುಮಾನ್ಗಢ ಜಿಲ್ಲೆಯಲ್ಲಿ ನಡೆದ ಟ್ರಕ್ ಮತ್ತು ಕಾರು ಮುಖಾಮುಖಿ ಡಿಕ್ಕಿಯಲ್ಲಿ ಐವರು ಮೃತಪಟ್ಟು, ಓರ್ವ ಗಂಭೀರವಾಗಿ ಗಾಯಗೊಂಡಿದ್ದ. ಛತ್ತೀಸ್ಗಢದ ರಾಯಪುರದಲ್ಲಿ ಬೈಕ್ ಅಪಘಾತದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಸೇರಿ ಇಬ್ಬರು ಮೃತಪಟ್ಟಿದ್ದರು.
ಇದನ್ನೂ ಓದಿ: ಹೊಸ ವರ್ಷದ ಸಂಭ್ರಮದಲ್ಲಿ ಶೋಕ: ಭೀಕರ ರಸ್ತೆ ಅಪಘಾತದಲ್ಲಿ 7 ಮಂದಿ ದುರ್ಮರಣ