ಮಂಡ್ಯ: ಸಾಹೇಬರೇ, ಹಸುಗಳಿಗೆ ಮೇವಿಲ್ಲ. ಮೇವು ನೀಡಿ ಪುಣ್ಯ ಕಟ್ಟಿಕೊಳ‍್ಳಿ ಎಂದು ರೈತ ಮನವಿ ಮಾಡಿದ್ದ. ಆದರೆ ತಹಶೀಲ್ದಾರ್ ಮನವಿಗೆ ಸ್ಪಂದನೆ ನೀಡಿರಲಿಲ್ಲ ಎನ್ನಲಾಗಿದೆ. ಇದರಿಂದ ರೊಚ್ಚಿಗೆದ್ದ ರೈತ ತಹಸೀಲ್ದಾರ್ ಕಚೇರಿ ಮುಂದೆ ಜಾನುವಾರುಗಳನ್ನು ತಂದು ಕಟ್ಟಿದ್ದಾನೆ.
ಕೆ.ಆರ್.ಪೇಟೆ ತಾಲೂಕಿನ ಸಾದುಗೋನಹಳ್ಳಿ ರೈತ ರಾಜೇಗೌಡ ಜಾನುವಾರುಗಳನ್ನು ಸಾಕಲು 50 ಸಾವಿರ ರೂಪಾಯಿ ಕೊಟ್ಟು ಮೇವು ಖರೀದಿ ಮಾಡಿದ್ದರು. ಆದರೆ ಸೋಮವಾರ ಆಕಸ್ಮಿಕ ಬೆಂಕಿಯಿಂದ ಮೇವು ಸಂಪೂರ್ಣ ಭಸ್ಮಗೊಂಡಿತ್ತು. ಇದರಿಂದ ನೊಂದ ರೈತ ಜಾನುವಾರುಗಳ ಮೇವಿಗಾಗಿ ತಹಸೀಲ್ದಾರ್ ಶಿವಮೂರ್ತಿ ಬಳಿ ಹೋಗಿ ಮನವಿ ಮಾಡಿದ್ದರು.
ರಾಜೇಗೌಡರ ಮನವಿಯನ್ನು ತಿರಸ್ಕರಿಸಿದ ತಹಸೀಲ್ದಾರ್, ನಾನು ಎಲ್ಲಿಂದ ಮೇವು ತರಲಿ ಎಂದು ಪ್ರಶ್ನೆ ಮಾಡಿದ್ದರಂತೆ. ಇದರಿಂದ ರೊಚ್ಚಿಗೆದ್ದ ರೈತ ತಾನು ಸಾಕಿದ್ದ ಜಾನುವಾರುಗಳನ್ನು ತಹಸೀಲ್ದಾರ್ ಕಚೇರಿಗೆ ತಂದು ನೀವೇ ಸಾಕಿ ಸ್ವಾಮಿ ಎಂದು ದಂಬಾಲು ಬಿದ್ದಿದ್ದಾನೆ.
ರೈತನ ಹೊಸ ಶೈಲಿಯ ಪ್ರತಿಭಟನೆಗೆ ಬೆದರಿದ ತಹಸೀಲ್ದಾರ್ ಶಿವಮೂರ್ತಿ, ಈಗ ಮೇವು ನೀಡುವ ಭರವಸೆ ನೀಡಿದ್ದಾರೆ. ಮೇವು ಸಿಗದೇ ಇದ್ದರೆ ಪರಿಹಾರದ ಭರವಸೆ ನೀಡಿದರು. ಭರವಸೆಯಿಂದ ಸಂತೃಪ್ತಗೊಂಡ ರೈತ ಜಾನುವಾರುಗಳನ್ನು ಮನೆಗೆ ಹಿಡಿದುಕೊಂಡು ಹೋಗಿದ್ದಾನೆ. ಒಂದೊಮ್ಮೆ ಮೇವು ಅಥವಾ ಪರಿಹಾರ ಸಿಗದೇ ಇದ್ದರೆ ಜಾನುವಾರುಗಳನ್ನು ಮತ್ತೆ ತಹಸೀಲ್ದಾರ್ ಕಚೇರಿಗೆ ತಂದು ಬಿಡುವುದಾಗಿ ಎಚ್ಚರಿಕೆ ನೀಡಿದ್ದಾನೆ.
ರೈತನ ಹೋರಾಟಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸರ್ಕಾರ ಮೇವಿನ ಬ್ಯಾಂಕ್ ಪ್ರಾರಂಭ ಮಾಡಿತ್ತು. ಎಲ್ಲಾ ಮೇವನ್ನು ರೈತರಿಗೆ ನೀಡಲಾಗಿದೆಯಾ ಎಂದು ಜನ ಪ್ರಶ್ನೆ ಎತ್ತಿದ್ದಾರೆ. ಮೇವು ಕಳೆದುಕೊಂಡ ರೈತರಿಗೆ ಪರಿಹಾರ ನೀಡಿ ಎಂದು ಮನವಿ ಮಾಡಿದ್ದಾರೆ.