ಮಂಡ್ಯ: ಕಳೆದ ವರ್ಷ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಾಲ್ವರನ್ನು ಬಲಿ ಪಡೆದಿದ್ದ ಕಾಡಾನೆ ಮದ್ದೂರು ತಾಲೂಕಿನಲ್ಲಿ ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಈ ಆನೆಯನ್ನು ಸಕಲೇಶಪುರದಲ್ಲಿ ಸೆರೆ ಹಿಡಿದು ಕೌದಳ್ಳಿ ಅರಣ್ಯ ಪ್ರದೇಶಕ್ಕೆ ತಂದು ಬಿಡಲಾಗಿತ್ತು. ಈ ಆನೆ ಮತ್ತೊಂದು ಕಾಡಾನೆಯೊಂದಿಗೆ ಹಲಗೂರು ಸಮೀಪದ ನಂಜಾಪುರ ಗ್ರಾಮದ ಹೊರವಲಯದಲ್ಲಿ ಶನಿವಾರ ಸಂಜೆ ಕಾಣಿಸಿಕೊಂಡಿತ್ತು.
ಮುತ್ತತ್ತಿ ಅರಣ್ಯ ಪ್ರದೇಶದ ಕಾಡಾನೆಗಳ ಜೊತೆ ಸೇರದ ಈ ಆನೆ, ಇಂದು ಬೆಳಗ್ಗೆ ಮದ್ದೂರು ತಾಲೂಕಿನ ಕೂಳಗೆರೆ ಸಮೀಪದ ಗದ್ದೆಯಲ್ಲಿಯೂ ಪ್ರತ್ಯಕ್ಷವಾಗಿದೆ. ತಕ್ಷಣ ಜಾಗೃತರಾದ ಅರಣ್ಯ ಇಲಾಖೆ ಸಿಬ್ಬಂದಿ, ದಿನಪೂರ್ತಿ ಊರಿನ ಸುತ್ತಲೂ ಕಾವಲು ಕಾಯುತ್ತಿದ್ದಾರೆ. ರಾತ್ರಿ ಸಮಯದಲ್ಲಿ ಕಾಡಿಗೆ ಮರಳಿಸುವ ಪ್ಲಾನ್ ಮಾಡಿಕೊಂಡಿದ್ದಾರೆ.
ಸಕಲೇಶಪುರದಲ್ಲಿ ಸೆರೆ ಹಿಡಿದ ಈ ಆನೆಯನ್ನು ಅರಣ್ಯ ವಲಯಕ್ಕೆ ಬಿಡುವ ಸಮಯದಲ್ಲಿ ಕೊರಳಿಗೆ ರೇಡಿಯೋ ಕಾಲರ್ ಅಳವಡಿಸಲಾಗಿತ್ತು. ಇದರಿಂದಾಗಿ ಇದು ಸಕಲೇಶಪುರದಿಂದ ಬಂದ ಆನೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ದೃಢಪಡಿಸಿದ್ದಾರೆ.
ಸಕಲೇಶಪುರ ಅರಣ್ಯ ವ್ಯಾಪ್ತಿಯಲ್ಲಿ ರೈತರನ್ನು ಕಾಡಿದ್ದ ಈ ಆನೆಯ ಆಗಮನದಿಂದ ಸುತ್ತಮುತ್ತಲಿನ ಜನರಿಗೆ ಭಯ ಶುರವಾಗಿದೆ. ಆನೆಯನ್ನು ಕಾಡಿಗಟ್ಟುವ ಕಾರ್ಯಾಚರಣೆಯಲ್ಲಿ ವಲಯ ಅರಣ್ಯ ಸಂರಕ್ಷಣಾ ಅಧಿಕಾರಿಗಳಾದ ಮಹದೇವಸ್ವಾಮಿ, ಆಸಿಫ್ ಅಹಮದ್, ಉಪವಲಯ ಅರಣ್ಯಾಧಿಕಾರಿ ನಂದೀಶ್, ಅರಣ್ಯ ರಕ್ಷಕ ಸಿದ್ದರಾಮ ಪೂಜಾರಿ, ಅರಣ್ಯ ವೀಕ್ಷಕ ಬಸವಣ್ಣ ಇದ್ದಾರೆ.
ಓದಿ : ಶಾರ್ಟ್ ಸರ್ಕ್ಯೂಟ್ನಿಂದ ಫಸಲಿಗೆ ಬಂದ ಕಬ್ಬು ನಾಶ : ಸೆಸ್ಕ್ ವಿರುದ್ಧ ಗ್ರಾಮಸ್ಥರ ಆಕ್ರೋಶ