ಮಂಡ್ಯ: ತಲಕಾವೇರಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ವ್ಯಾಪಕವಾಗಿ ಮಳೆಯಾದ ಹಿನ್ನೆಲೆಯಲ್ಲಿ ಜೀವನದಿ ಕಾವೇರಿ ಉಕ್ಕಿ ಹರಿಯುತ್ತಿದ್ದಾಳೆ. ಹೀಗಾಗಿ ಕಾವೇರಿ ಒಳ ಹರಿವಿನ ಪ್ರಮಾಣ ಹೆಚ್ಚಾಗಿದ್ದು, ಕೆಆರ್‌ಎಸ್ ಜಲಾಶಯದಿಂದ ನದಿಗೆ 1.60 ಲಕ್ಷ ಕ್ಯೂಸೆಕ್ ನೀರು ಬಿಡಲಾಗಿದೆ.
ಸದ್ಯ ಜಲಾಶಯದಲ್ಲಿ 120 ಅಡಿ ನೀರಿದ್ದು, ಭರ್ತಿಯಾಗಲು ಕೇವಲ 4 ಅಡಿ ಬಾಕಿ ಇದೆ. ಒಳ ಹರಿವು 2 ಲಕ್ಷ ಕ್ಯೂಸೆಕ್ ದಾಟುವ ನಿರೀಕ್ಷೆ ಇದ್ದು, ಜಲಾಶಯದಿಂದ ಹೊರ ಹರಿವು ಹೆಚ್ಚಿಸಲಾಗಿದೆ. ನದಿ ಪಾತ್ರದ ಪ್ರದೇಶದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಜಮೀನುಗಳು ನೀರಿನಲ್ಲಿ ಮುಳುಗಿವೆ.
ನದಿ ದಂಡೆಯ ಪ್ರಸಿದ್ದ ಪ್ರವಾಸಿ ತಾಣಗಳಾದ ಬಲಮುರಿ, ಎಡಮುರಿ, ರಂಗನತಿಟ್ಟು, ಸಂಗಮ, ಸ್ನಾನಘಟ್ಟ ಸಂಪೂರ್ಣ ಜಲಾವೃತಗೊಂಡಿದ್ದು, ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ನಿಮಿಷಾಂಬ ದೇಗುಲದವರೆಗೂ ಪ್ರವಾಹದ ನೀರು ಬಂದಿದ್ದು, ಪಾರಂಪರಿಕ ವೆಲ್ಲೆಸ್ಲಿ ಸೇತುವೆ ಮಟ್ಟದಲ್ಲಿ ನೀರು ಹರಿಯುತ್ತಿದೆ. ಸೇತುವೆ ಮೇಲೆ ಸಂಚಾರ ನಿರ್ಬಂಧಿಸಲಾಗಿದ್ದು, ಜನರು ಪ್ರವಾಹ ನೋಡಲು ಆಗಮಿಸ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ತಾಲೂಕು ಆಡಳಿತದಿಂದ ಅಪಾಯಕಾರಿ ಸ್ಥಳಗಳ ಬಳಿ ಬ್ಯಾರಿಕೇಡ್ ಅಳವಡಿಸಿ ಭದ್ರತೆಗೆ ಪೊಲೀಸ್ ಮತ್ತು ಹೋಮ್‌ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ.
ಜಲ ವಿದ್ಯುತ್ ಕೇಂದ್ರಗಳಿಗೆ ನುಗ್ಗಿದ ನೀರು:
ಕೆಆರ್‌ಪೇಟೆ ತಾಲೂಕಿನ ಮಂದಗೆರೆ ಹಾಗೂ ಮಳವಳ್ಳಿ ತಾಲೂಕಿನ ಶಿವನಸಮುದ್ರ ಬಳಿಯ ಕೆಲವು ಖಾಸಗಿ ಜಲ ವಿದ್ಯುತ್ ಕೇಂದ್ರಗಳಿಗೆ ನೀರು ನುಗ್ಗಿದ್ದು, ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ. ಕೆಆರ್‌ಪೇಟೆ ತಾಲೂಕಿನ ಕಿಕ್ಕೇರಿ ಹಾಗೂ ಮಂದಗೆರೆ ಸಂಪರ್ಕ ಕಡಿತಗೊಂಡಿದೆ. ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ನಷ್ಟ ಸಂಭವಿಸಿದೆ.