ಮಂಡ್ಯ: ಕೊರೊನಾ 2 ನೇ ಅಲೆಯಿಂದಾಗಿ ಕೊರೊನಾ ಹಾಟ್‌ಸ್ಪಾಟ್ ಆಗಿದ್ದು, ಅತಿ ಹೆಚ್ಚು ಪ್ರಕರಣಗಳು ತಾಲ್ಲೂಕಿನಲ್ಲಿ ವರದಿಯಾಗುತ್ತಿದೆ. ಹೀಗಾಗಿ ಹೆಚ್ಚು ಸೋಂಕಿತರನ್ನು ಹೊಂದಿರುವ ಗ್ರಾಮಗಳನ್ನು ತಾಲೂಕು ಆಡಳಿತ ಮಂಡಳಿ ಸೀಲ್ ಡೌನ್ ಮಾಡುತ್ತಿದೆ.
ತಾಲ್ಲೂಕು ಆಡಳಿತ 10 ಗ್ರಾಮಗಳನ್ನು ಕಂಟೈನ್ಮೆಂಟ್ ವಲಯಗಳನ್ನಾಗಿ ಮಾಡಲಾಗಿದೆ. ಸಾರ್ವಜನಿಕರ ಪ್ರವೇಶ, ಹೊರ ಹೋಗುವುದನ್ನು ನಿರ್ಬಂಧಿಸಲಾಗಿದೆ. ಜಿಲ್ಲೆಯಲ್ಲಿ ಮಂಡ್ಯ ತಾಲ್ಲೂಕಿನಲ್ಲಿ ಸೋಂಕಿತರ ಕುಟುಂಬದವರು, ಸೌಮ್ಯ ಸ್ವಭಾವದ ಗುಣಲಕ್ಷಣ ಹೊಂದಿರುವ ಸೋಂಕಿತರು, ನೆಗೆಟಿವ್ ವರದಿ ಬಂದಿರುವವರಿಗೆ ಮನೆಯಲ್ಲಿ ಆರೈಕೆಯಲ್ಲಿರಲು ಅವಕಾಶ ನೀಡಿದರೆ, ಅವರು ಸಾಮಾನ್ಯರಂತೆ ತಿರುಗಾಡುತ್ತಿದ್ದರು. ಈ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಚಂದ್ರಶೇಖರ್ ಶಂ. ಗಾಳಿ ನೇತೃತ್ವದ ಅಧಿಕಾರಿಗಳ ತಂಡ ಸೋಂಕಿತರ ಮನೆಯ 200 ಮೀಟರ್ ವ್ಯಾಪ್ತಿಯಲ್ಲಿ ಕಂಟೇನ್‌ಮೆಂಟ್ ಝೋನ್ ಆಗಿ ಮಾಡಿದ್ದಾರೆ.
ಮಂಡ್ಯ ತಾಲ್ಲೂಕಿನ ಹನಕೆರೆಯಲ್ಲಿ 41 ಸಕ್ರಿಯ ಪ್ರಕರಣಗಳು, ಕೊತ್ತತ್ತಿ (23), ಹಳುವಾಡು (24), ಮಂಗಲ (30), ಹೆಮ್ಮಿಗೆ (28), ಹೆಬ್ಬಕವಾಡಿ (21), ತೂಬಿನಕೆರೆ (25), ಕೀಲಾರ (45), ಹುಲಿವಾನ (38), ಬಸರಾಳು ಗ್ರಾಮದಲ್ಲಿ 31 ಸಕ್ರಿಯ ಪ್ರಕರಣಗಳಿವೆ. ಸೋಂಕಿತರ ಮನೆ, ಹೋಮ್ ಐಸೋಲೇಷನ್‌ನಲ್ಲಿ ಇರುವವರ ಮನೆಯ 200 ಮೀಟರ್ ಸುತ್ತ ನಿರ್ಬಂಧ ವಿಧಿಸಲಾಗಿದೆ.
ಕೃಷಿ ಚಟುವಟಿಕೆಗಳನ್ನು ಹೊರತುಪಡಿಸಿ 14 ದಿನಗಳವರೆಗೆ ಬೇರೆಲ್ಲ ಚಟುವಟಿಕೆಗಳಿಗೆ ಅವಕಾಶ ಇರುವುದಿಲ್ಲ ಎಂದು ಚಂದ್ರಶೇಖರ್ ತಿಳಿಸಿದರು. ಕಂಟೈನ್ಮೆಂಟ್ ಝೋನ್‌ನಲ್ಲಿ ಆರೋಗ್ಯ ಕಾರ್ಯಕರ್ತರು ಇರಲಿದ್ದು, ಏನೇ ಸಮಸ್ಯೆ ಇದ್ದರೂ ಅವರನ್ನು ಸಂಪರ್ಕಿಸಬಹುದು ಅಥವಾ ತಾಲ್ಲೂಕು ಆಡಳಿತ 24x7 ಕೋವಿಡ್ ವಾರ್ ರೂಂ 08232–224048 ಪ್ರಾರಂಭಿಸಲಾಗಿದ್ದು, ಅದಕ್ಕೆ ಕರೆ ಮಾಡಬಹುದು. ಗ್ರಾಮ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚಿಸಲಾಗಿದ್ದು, ಕಾರ್ಯನಿರ್ವಹಿಸುತ್ತಿದೆ. ಕೊರೊನಾ ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರೆಳಿದವರಿಗೆ ಯಾವುದೇ ಅಡೆ ತಡೆ ಮಾಡಬಾರದು ಎಂದು ಹೇಳಿದರು.