ಮಂಡ್ಯ: ಕೊರೊನಾ 3ನೇ ಅಲೆ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎನ್ನುವ ತಜ್ಞರ ವರದಿ ನಡುವೆಯೇ ಮಂಡ್ಯ ಜಿಲ್ಲೆಯೊಂದರಲ್ಲೇ ಶೇ 10.3 ರಷ್ಟು ಮಕ್ಕಳ ಮೇಲೆ ಕೋವಿಡ್ ದೃಢಪಟ್ಟಿದೆ. 2ನೇ ಅಲೆಗೆ ತೆರೆಬೀಳುವ ಮೊದಲೇ 3ನೇ ಅಲೆ ಆರಂಭದ ಲಕ್ಷಣ ಗೋಚರಿಸಲಾರಂಭಿಸಿದೆ.
ಮೊದಲ ಅಲೆಯಲ್ಲಿ ಶೇ. 9.5ಕ್ಕೂ ಹೆಚ್ಚು ಮಕ್ಕಳಲ್ಲಿ ಸೋಂಕು ಪತ್ತೆಯಾಗಿತ್ತು. ಆದ್ರೆ ಜಿಲ್ಲೆಯಲ್ಲಿ ಕೋವಿಡ್ 3ನೇ ಅಲೆಯಲ್ಲಿ ಮಕ್ಕಳಿಗೆ ತೊಂದರೆಯಾಗದಂತೆ ಜಿಲ್ಲಾಡಳಿತ ಸಿದ್ದವಾಗಿದೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಧನಂಜಯ, 'ಕೋವಿಡ್ ಮಕ್ಕಳಿಗೆ ವಿಶೇಷವಾಗಿ ಬರುತ್ತದೆ ಅನ್ನೋದು ತಪ್ಪು. ಮನೆಯಲ್ಲಿ ಒಬ್ಬರಿಗೆ ಬಂದರೆ ಮಕ್ಕಳ ಮೇಲೂ ಪರಿಣಾಮ ಬೀರುತ್ತೆ. ಆದ್ರೆ ಈ 3ನೇ ಅಲೆಗೆ ಯಾರೂ ಕೂಡ ಆತಂಕಪಡುವ ಅಗತ್ಯವಿಲ್ಲ' ಎಂದರು.
ಮೊದಲನೇ ಹಾಗೂ ಎರಡನೇ ಅಲೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಮಕ್ಕಳಲ್ಲಿ ರೋಗಲಕ್ಷಣಗಳಿಲ್ಲ. ಕೋವಿಡ್ನಿಂದ ಮಕ್ಕಳ ಸಾವಾಗಿಲ್ಲ. ಈಗ ಜಿಲ್ಲಾಡಳಿತದ ಸಲಹೆಯಂತೆ ಮೂರನೇ ಅಲೆಗೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ನಮ್ಮ ಪೂರ್ವ ತಯಾರಿ ಬಗ್ಗೆ ಸಚಿವರಿಗೆ ಹಾಗೂ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಾಗಿದೆ ಎಂದು ಹೇಳಿದರು.
ಮಕ್ಕಳಿಗೆ ವಿಶೇಷವಾಗಿ ಐಸಿಯು ಬೆಡ್ಗಳ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಕೇರ್ ಸೆಂಟರ್ ಕೂಡ ರೆಡಿ ಮಾಡಲಾಗಿದೆ. ಆದರೆ ಯಾರೂ ಕೂಡ ಆತಂಕಪಡುವ ಅಗತ್ಯವಿಲ್ಲ. ಕೊರೊನಾ ನಿಯಮ ಪಾಲನೆ ಮಾಡಿದರೆ ಸಾವು ಸಂಭವಿಸುವುದಿಲ್ಲ ಎಂದರಲ್ಲದೆ, ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್ ಬಳಸಿ ಎಚ್ಚರಿಕೆ ವಹಿಸಬೇಕು ಎಂದು ಡಿಎಚ್ಓ ಡಾ.ಧನಂಜಯ್ ಸಲಹೆ ನೀಡಿದರು.
ಇದನ್ನೂ ಓದಿ: ವರ್ಷಾಂತ್ಯದೊಳಗೆ ಎಲ್ಲರಿಗೂ ವ್ಯಾಕ್ಸಿನ್; ಸಿಎಂ ಯಡಿಯೂರಪ್ಪ