ಮಂಡ್ಯ : ಕೊರೊನಾ ಹಿನ್ನೆಲೆ ಮಾಸ್ಕ್ ಧರಿಸದಿರುವುದು ಹಾಗೂ ಮೋಟಾರು ಕಾಯ್ದೆ ಉಲ್ಲಂಘನೆ ಮಾಡಿದ ಪ್ರಕರಣಗಳಲ್ಲಿ ಎರಡು ದಿನದಲ್ಲಿ ನಗರ ಪೊಲೀಸರು 1.86 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ.
ಬುಧವಾರ ಮೋಟಾರು ಕಾಯ್ದೆ ಉಲ್ಲಂಘನೆ ಮಾಡಿದ 48 ಪ್ರಕರಣಗಳಲ್ಲಿ 23,400 ರೂ. ಹಾಗೂ ಮಾಸ್ಕ್ ಧರಿಸದ 167 ಪ್ರಕರಣಗಳಲ್ಲಿ 16,700 ರೂ. ದಂಡ ವಿಧಿಸಲಾಗಿದೆ.
ಗುರುವಾರದಂದು ಮಾಸ್ಕ್ ಧರಿಸದ 275 ಪ್ರಕರಣಗಳಲ್ಲಿ 27,500 ರೂ. ಮೋಟಾರು ಕಾಯ್ದೆ ಉಲ್ಲಂಘನೆ ಮಾಡಿದ 232 ಪ್ರಕರಣಗಳಲ್ಲಿ 1,19,200 ರೂ. ದಂಡ ವಸೂಲಿ ಮಾಡಲಾಗಿದೆ.
ಜನತಾ ಕರ್ಫ್ಯೂ ಸಮಯ ಪ್ರಮುಖ ರಸ್ತೆಗಳಲ್ಲಿ ಪರಿಶೀಲನೆ ನಡೆಸುತ್ತಿರುವ ಪೊಲೀಸರು ಅನವಶ್ಯಕವಾಗಿ ಓಡಾಡುವವರ ಮೇಲೆ ನಿಗಾವಹಿಸಿದ್ದಾರೆ. ಅನಗತ್ಯವಾಗಿ ಓಡಾಡುವವರಿಗೆ ಕಡಿವಾಣ ಹಾಕಲು ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಿದ್ದಾರೆ.
ಶುಕ್ರವಾರ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಧನಂಜಯ್ ಖುದ್ದು ವಾಹನಗಳ ಪರಿಶೀಲನೆ ನಡೆಸಿದರು. ಔಷಧಿ ಖರೀದಿಸುವವರು, ವೈದ್ಯಕೀಯ ತಪಾಸಣೆ, ಪಿಂಡ ಪ್ರದಾನ ಮಾಡುವವರು ಸೇರಿದಂತೆ ತುರ್ತು ಅಗತ್ಯ ವಿರುವವರನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ಸರ್ಕಾರಿ ನೌಕರರು ಗುರುತಿನ ಚೀಟಿ ತೋರಿಸುವುದರೊಂದಿಗೆ ಸಂಚರಿಸುತ್ತಿದ್ದರು.
ಸರಕು ಸಾಗಣೆ, ಕಟ್ಟಡ ಸಾಮಾಗ್ರಿ, ಔಷಧ ಸಾಗಿಸುವ ವಾಹನಗಳು ಸೇರಿದಂತೆ ಇನ್ನಿತರ ತುರ್ತು ಸೇವೆ ವಾಹನಗಳಿಗೆ ಸಂಚಾರದಲ್ಲಿ ರಿಯಾಯಿತಿ ನೀಡಲಾಗಿತ್ತು. ಹೆದ್ದಾರಿಯಲ್ಲಿ ಸಂಚರಿಸುವವರನ್ನು ಪರಿಶೀಲಿಸಿ, ಪೊಲೀಸರು ಬಿಡುತ್ತಿದ್ದರು. ಅನವಶ್ಯಕವಾಗಿ ಓಡಾಡುವವರಿಗೆ ದಂಡ ವಿಧಿಸಿದ್ದಾರೆ.
ಜನತಾ ಕರ್ಫ್ಯೂ ಜಾರಿಯಲ್ಲಿರುವುದರಿಂದ ಯಾರೂ ಅನಗತ್ಯವಾಗಿ ಓಡಾಡಬಾರದು. ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದು. ಇಲ್ಲದಿದ್ದರೆ ದಂಡದ ಜೊತೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಎಎಸ್ಪಿ ಧನಂಜಯ್ ಎಚ್ಚರಿಸಿದ್ದಾರೆ.