ಕೊಪ್ಪಳ : ಗಣೇಶ ನಿಮಜ್ಜನ ವೇಳೆ ಡಿಜೆ ನಿಷೇಧವಿದ್ದರೂ ನಗರದಲ್ಲಿ ಮೆರವಣಿಗೆ ವೇಳೆ ಪೊಲೀಸರು ಹಾಗೂ ಯುವಕರ ನಡುವೆ ವಾಗ್ವಾದ ನಡೆದಿದೆ. ವಾಗ್ವಾದದ ಬಳಿಕ ಪೊಲೀಸರು ಡಿಜೆ ಬಂದ್ ಮಾಡಿಸಿದ ಘಟನೆ ನಡೆದಿದೆ.
ಐದನೇ ದಿನದ ಗಣೇಶಮೂರ್ತಿ ನಿಮಜ್ಜನ ಹಿನ್ನೆಲೆ ನಗರದ ಬನ್ನಿಕಟ್ಟೆ ಪ್ರದೇಶದ ಗಣೇಶ ಮೂರ್ತಿಯನ್ನು ಡಿಜೆ ಹಚ್ಚಿಕೊಂಡು ರಾತ್ರಿ ಮೆರವಣಿಗೆ ಮಾಡಲಾಗುತ್ತಿತ್ತು. ಮೆರವಣಿಗೆಯಲ್ಲಿ ಸಾವಿರಾರು ಯುವಕರು ಪಾಲ್ಗೊಂಡು ಡಿಜೆ ಸೌಂಡ್ಗೆ ಹೆಜ್ಜೆ ಹಾಕುತ್ತಿದ್ದರು.
ಈ ವೇಳೆ, ಮಧ್ಯೆ ಪ್ರವೇಶಿಸಿದ ಪೊಲೀಸರು ಡಿಜೆ ಬಂದ್ ಮಾಡಿಸಿದರು. ಆದರೂ ಯವಕರ ಒತ್ತಾಯದ ಬಳಿಕ ಮತ್ತೆ ಡಿಜೆ ಆನ್ ಮಾಡಿಕೊಂಡು ಮೆರವಣಿಗೆ ಮುಂದುವರೆಯಿತು. ಈ ಸಂದರ್ಭದಲ್ಲಿ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಅಶೋಕ ಸರ್ಕಲ್ನಿಂದ ಜವಾಹರ ರಸ್ತೆ ಮೂಲಕ ಮೆರವಣಿಗೆ ತೆಗೆದುಕೊಂಡು ಹೋಗಲು ಯುವಕರು ಮುಂದಾದರು. ಈ ಸಂದರ್ಭದಲ್ಲಿ ಯುವಕರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಡಿಜೆ ಬಂದ್ ಮಾಡಿಸಿದ ಪೊಲೀಸರು, ಜವಾಹರ ರಸ್ತೆ ಮೂಲಕ ಮೆರವಣಿಗೆ ಸಾಗಲು ಅನುಮತಿ ನೀಡಲಿಲ್ಲ. ಹೀಗಾಗಿ ನೇರವಾಗಿ ಹೊಸಪೇಟೆ ರಸ್ತೆ ಮೂಲಕ ಗಣೇಶ ನಿಮಜ್ಜನಕ್ಕೆ ತೆರಳಲಾಯಿತು.