ಗಂಗಾವತಿ (ಕೊಪ್ಪಳ) : ಮುಂದಿನ ಎರಡು ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಹಿನ್ನೆಲೆ, ಕೊಪ್ಪಳ ಜಿಲ್ಲೆಯಾದ್ಯಂತ ಯಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಹವಾಮಾನ ವಿಜ್ಞಾನಿ ಫಕೀರಪ್ಪ ಅರಭಾವಿ ತಿಳಿಸಿದ್ದಾರೆ.
ಯಲ್ಲೋ ಅಲರ್ಟ್ ಸಂದರ್ಭದಲ್ಲಿ ರೈತರು ಯಾವುದೇ ಕೃಷಿ ಚಟುವಟಿಕೆ ಕೈಗೊಳ್ಳಬಾರದು. ಮುಖ್ಯವಾಗಿ ಹೊಲ-ಗದ್ದೆ, ತೋಟಗಳಿಗೆ ರಾಸಾಯನಿಕ ಸಿಂಪಡಿಸುವುದು, ಕ್ರಿಮಿನಾಶ, ಕೀಟನಾಶಕ ರಸಗೊಬ್ಬರ ಪೂರೈಸುವಂತಹ ಯಾವುದೇ ಕೆಲಸಕ್ಕೆ ಮುಂದಾಗಬಾರದು ಎಂದಿದ್ದಾರೆ.
ಈಗಾಗಲೇ ಜಿಲ್ಲೆಯಲ್ಲಿ ಮೆಕ್ಕೆಜೋಳ, ಸೂರ್ಯಕಾಂತಿ, ಶೇಂಗಾ ಬೆಳೆಯ ಕೊಯ್ಲು ನಡೆದಿದೆ. ಯಲ್ಲೋ ಅಲರ್ಟ್ ಸಂದರ್ಭದಲ್ಲಿ ರೈತರು ಬೆಳೆ ಕೊಯ್ಲನ್ನು ಮುಂದೂಡಬೇಕು. ಇಲ್ಲದಿದ್ದರೆ ಮಳೆಯಿಂದಾಗಿ ಇಳುವರಿ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.