ಕುಷ್ಟಗಿ(ಕೊಪ್ಪಳ): ಸಿದ್ದರಾಮಯ್ಯ ಅವರು ಇತ್ತೀಚೆಗೆ ಯಾಕೋ ತಾವು ಪ್ರತಿ ಪಕ್ಷದ ನಾಯಕನೆಂಬುದನ್ನು ಮರೆತು ಮಾತನಾಡುತ್ತಿದ್ದಾರೆ. ಅದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವಂಥದ್ದು ಅಲ್ಲ ಎಂದು ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಹೇಳಿದರು.
ಸಿಂದಗಿ ವಿಧಾನಸಭೆ ಉಪ ಚುನಾವಣೆ ಪ್ರಚಾರ ಕಾರ್ಯಕ್ಕೆ ಕುಷ್ಟಗಿ ಮೂಲಕ ತೆರಳುವ ಮಾರ್ಗದಲ್ಲಿ ಇಲ್ಲಿನ ಸರ್ಕ್ಯೂಟ ಹೌಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನವರು ಏನೇನೋ ಮಾತನಾಡಿ ತನ್ನ ಅಸ್ತಿತ್ವ ತಾನೇ ಕಳೆದುಕೊಳ್ಳುತ್ತಿದೆ. ಸಿದ್ದರಾಮಯ್ಯ ಅವರು ಇತ್ತೀಚೆಗೆ ಯಾಕೋ ತಾವು ವಿರೋಧ ಪಕ್ಷದ ನಾಯಕ ಎಂಬುದನ್ನು ಮರೆತು ಮಾತನಾಡುತ್ತಿದ್ದಾರೆ.
ಅದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವಂತಹದ್ದಲ್ಲ. ಹಾನಗಲ್, ಸಿಂದಗಿ ವಿಧಾನಸಭೆ ಕ್ಷೇತ್ರಗಳ ಚುನಾವಣೆ ಫಲಿತಾಂಶ ಬಂದ ಮೇಲೆ ನಿಮಗೆ ಗೊತ್ತಾಗುತ್ತದೆ. ಕಾಂಗ್ರೆಸ್ ಪಕ್ಷದ ನಿಜಬಣ್ಣ ಈಗಾಗಲೇ ಬಯಲಾಗಿದೆ ಎಂದರು.
ಸರ್ಕಾರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ: ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಇದನ್ನು ನಾನು ಹೇಳುತ್ತಿಲ್ಲ ಸಾಮಾನ್ಯ ಜನರೇ ಹೇಳುತ್ತಿದ್ದಾರೆ. ನೀರಾವರಿ ಕ್ಷೇತ್ರಕ್ಕೆ ಆದ್ಯತೆ ನೀಡಿದ್ದು, ಅಭಿವೃಧ್ಧಿ ಕಾರ್ಯಗಳಲ್ಲಿ ಹೆಚ್ಚು ತೊಡಗಿಸಿಕೊಂಡಿದೆ. ಕೊರೊನಾದಿಂದಾಗಿ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದಿದ್ದಾಗ್ಯೂ 200 ರೂ. ಪಿಂಚಣಿ ಜಾಸ್ತಿ ಮಾಡಿದ್ದಾಗಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಕಾಂಗ್ರೆಸ್ ಏನು ಬೇಕಾದ್ರೂ ಆರೋಪ ಮಾಡಲಿ ಬಿಜೆಪಿ ಸರ್ಕಾರ ಪ್ರಗತಿಯತ್ತ ಸಾಗಿದ್ದು, ಕೋವಿಡ್ ನಿಂದ ಸತ್ತವರಿಗೆ 1 ಲಕ್ಷ ರೂ. ಪರಿಹಾರದ ವಾಗ್ದಾನದ ಬಗ್ಗೆ ಪುನರುಚ್ಚರಿಸಿದರು.
ಹಾನಗಲ್, ಸಿಂದಗಿಯಲ್ಲಿ ಬಿಜೆಪಿ ಗೆಲುವು ನಿಶ್ಚಿತ: ಎರಡು ದಿನಗಳ ಸಿಂದಗಿ ಪ್ರವಾಸದಲ್ಲಿರುವೆ. ಸಿಂದಗಿ ಹಾಗೂ ಹಾನಗಲ್ ಈ ಎರಡು ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳ ಪರವಾಗಿ ಪ್ರಚಾರದಲ್ಲಿ ಭಾಗವಹಿಸುತ್ತಿರುವೆ. ಈ ಎರಡು ಕ್ಷೇತ್ರಗಳಲ್ಲಿ ಗೆಲುವಿನ ಪೂರಕ ವಾತಾವರಣವಿದ್ದು ಗೆಲ್ಲುವ ವಿಶ್ವಾಸವಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃಧ್ಧಿ ಕಾರ್ಯಗಳು ತಾವು ಸಿಎಂ ಆಗಿರುವ ವೇಳೆ ನಡೆದ ಅಭಿವೃಧ್ಧಿ ಕಾರ್ಯಗಳ ಆಧಾರದ ಮೇಲೆ ಮತ ಯಾಚಿಸುತ್ತಿದ್ದೇವೆ ಎಂದರು.
ಕಾಂಗ್ರೆಸ್ ಎಲ್ಲಿದೆಯಪ್ಪ? : ಕಾಂಗ್ರೆಸ್ ವಕ್ತಾರ ಸುರ್ಜೇವಾಲ ಬಿಜೆಪಿ ಭ್ರಷ್ಟಾಚಾರದ ಆರೋಪಕ್ಕೆ ಪ್ರತಿಕ್ರಿಯಿಸಿದ ಬಿಎಸ್ವೈ ಅವರು, ಈ ದೇಶದಲ್ಲಿ ಕಾಂಗ್ರೆಸ್ ಎಲ್ಲಿದೆಯಪ್ಪ?, ಕರ್ನಾಟಕದಲ್ಲಿ ಒಂದಿಷ್ಟು ಉಸಿರಾಟ ಮಾತ್ರವಿದೆ. ಕಾಂಗ್ರೆಸ್ಸಿನವರು ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದಾರೆ ಎಂದು ಹೇಳಿದರು.
ವಗ್ಗರಣಿ ಮಿರ್ಚಿ ಚಪ್ಪರಿಸಿದ ಬಿಎಸ್ ವೈ: ಬಿ. ಎಸ್. ಯಡಿಯೂರಪ್ಪ ಕುಷ್ಟಗಿ ಸರ್ಕ್ಯೂಟ್ ಹೌಸ್ ಗೆ ಬಂದಾಗ ಮಾಜಿ ಶಾಸಕ, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ, ಮಾಜಿ ಶಾಸಕ ಕೆ.ಶರಣಪ್ಪ ಅವರನ್ನು ಸನ್ಮಾನಿಸಿ ಸ್ವಾಗತಿಸಿದರು. ನಂತರ ಟಿಫಿನ್ ಏನಿದೆ ಎಂದು ಬಿಎಸ್ವೈ ಕೇಳಿದಾಗ ವಗ್ಗರಣಿ ಮಿರ್ಚಿ ಇರುವುದಾಗಿ ದೊಡ್ಡನಗೌಡ ಪಾಟೀಲ ಹೇಳಿದರು. ವಗ್ಗರಣಿ, ಮಿರ್ಚಿ ಉಪಹಾರಕ್ಕೆ ವ್ಯವಸ್ಥೆ ಮಾಡಿದರು. ಮಾಜಿ ಸಿಎಂ ಬಿಎಸ್ವೈ ವಗ್ಗರಣೆ ಮಿರ್ಚಿಯನ್ನು ಚಪ್ಪರಿಸಿದರು.