ಕೊಪ್ಪಳ : ಯಡಿಯೂರಪ್ಪ ಸರ್ಕಾರ ಬರೀ ದುಡ್ಡು ಹೊಡೆಯುತ್ತಿದೆ ಹೊರತು ಬೇರೇನೂ ಮಾಡುತ್ತಿಲ್ಲ. ಇದನ್ನು ನಾನು ಹೇಳುತ್ತಿಲ್ಲ. ಅವರದ್ದೇ ಪಕ್ಷದವರು ಹೇಳುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು.
ನಗರದ ತಾಲೂಕ ಕ್ರೀಡಾಂಗಣದಲ್ಲಿ ಸ್ಥಳೀಯ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ವತಿಯಿಂದ ಬಡವರಿಗೆ 15 ಸಾವಿರ ಫುಡ್ ಕಿಟ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯಡಿಯೂರಪ್ಪ ಹಾಗೂ ಅವರ ಮಗ ದುಡ್ಡು ಹೊಡೆಯುವುದನ್ನು ಬಿಟ್ಟು ಬೇರೇನೂ ಮಾಡುತ್ತಿಲ್ಲ. ಹಾಗಂತಾ, ಅವರ ಪಕ್ಷದವರೇ ಆದ ಯತ್ನಾಳ್, ವಿಶ್ವನಾಥ್, ಬೆಲ್ಲದ್, ಯೋಗೇಶ್ವರ್ ಹೇಳುತ್ತಿದ್ದಾರೆ ಎಂದು ಹೇಳಿದರು.
ಸೋಂಕಿತರ ಸಾವಿಗೆ ಬಿಜೆಪಿಯೇ ಕಾರಣ : ಬಿಜೆಪಿ ಸರ್ಕಾರದಿಂದ ಯಾವುದೇ ಹೊಸ ಯೋಜನೆ ಬಂದಿಲ್ಲ. ರಾಜ್ಯದಲ್ಲಿ ಕೊರೊನಾ ಬಂದು ಒಂದು ವರ್ಷ ಮೂರು ತಿಂಗಳಿಗೂ ಹೆಚ್ಚು ಕಾಲವಾಗಿದೆ. ಎರಡನೇ ಅಲೆಯಲ್ಲಿ ಬಹಳ ಜನರು ಸಾವನ್ನಪ್ಪಿದರು. ಇದಕ್ಕೆ ಬಿಜೆಪಿ ಸರ್ಕಾರವೇ ನೇರ ಕಾರಣ. 2ನೇ ಅಲೆ ತಡೆಯಲು ಯಡಿಯೂರಪ್ಪ ಸರ್ಕಾರ ಮುಂಜಾಗ್ರತವಾಗಿ ಕ್ರಮಗಳನ್ನು, ಸರಿಯಾದ ಸಿದ್ಧತೆಗಳನ್ನು ಮಾಡಲಿಲ್ಲ. ಸರಿಯಾಗಿ ಕ್ರಮಗಳನ್ನ ಕೈಗೊಂಡಿದ್ದರೆ, ಅಷ್ಟೊಂದು ಜನರು ಸಾವನ್ನಪ್ಪುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಾಮರಾಜನಗರ ದುರಂತಕ್ಕೆ ಬಿಎಸ್ವೈ ನೇರಹೊಣೆ : ಬೆಡ್, ಆಕ್ಸಿಜನ್, ರೆಮ್ಡಿಸಿವೀಯರ್ ಹಾಗೂ ಸರಿಯಾದ ಚಿಕಿತ್ಸೆ ಸಿಗದೆ ಸೋಂಕಿತರು ಸಾವನ್ನಪ್ಪಿದರು. ಚಾಮರಾಜನಗರದಲ್ಲಿ ಆಕ್ಸಿಜನ್ ಸಿಗದೆ ಒಂದೇ ದಿನ 36 ಜನರು ಸಾವನ್ನಪ್ಪಿದರು. ಇದಕ್ಕೆಲ್ಲಾ ಮಿಸ್ಟರ್ ಯಡಿಯೂರಪ್ಪನವರೇ ನೇರ ಹೊಣೆ. ಅಲ್ಲಿ ಮೂರೇ ಜನ ಸಾವನ್ನಪ್ಪಿದರು ಎಂದು ಆರೋಗ್ಯ ಸಚಿವ ಸುಧಾಕರ್ ಹಸಿಸುಳ್ಳು ಹೇಳಿದರು ಎಂದು ದೂರಿದರು.
ಅಚ್ಛೆ ದಿನ್ ಎಲ್ಲಿದೆ..?: ಸೋಂಕು ನಿಯಂತ್ರಿಸಲು ಲಾಕ್ಡೌನ್ ಮಾಡಲು ನಾವು ಬೇಡ ಎನ್ನುವುದಿಲ್ಲ. ಆದರೆ, ಬಡವರಿಗೆ 10 ಸಾವಿರ ರೂ. ಹಣ, ಆಹಾರ ಕೊಡಿ ಎಂದು ಆಗ್ರಹಿಸಿದರೂ ಸರ್ಕಾರ ಜಪ್ಪಯ್ಯ ಎನ್ನಲಿಲ್ಲ. ಅಕ್ಕಿ ಕೊಡುವುದನ್ನೂ ಕಡಿತ ಮಾಡಿದರು. ಏಳು ಕೆಜಿ ಅಕ್ಕಿ ಕೊಟ್ಟಿದ್ದರೆ ಇವರ ಅಪ್ಪನ ಮನೆಯದ್ದು ಏನಾದ್ರೂ ಹೋಗುತ್ತಿತ್ತಾ? ಜನರ ದುಡ್ಡನ್ನು ಜನರಿಗೆ ಕೊಡದ ಇಂತಹ ಸರ್ಕಾರ, ಇಂತಹ ಮುಖ್ಯಮಂತ್ರಿ ಇರಬೇಕಾ? ಅಚ್ಚೇ ದಿನ್ ಬರುತ್ತೆ ಎಂದು ಮೋದಿ ಹೇಳಿದ್ದರು. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಬಡವರ ಬದುಕು ಕಷ್ಟವಾಗಿದೆ. ಎಲ್ಲಿದೆ ಅಚ್ಛೇ ದಿನ್ ಎಂದು ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.