ಕುಷ್ಟಗಿ(ಕೊಪ್ಪಳ): ಮಳೆ ಕಡಿಮೆಯಾಗುತ್ತಿದ್ದಂತೆ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಧೂಳು ತುಂಬಿಕೊಂಡು ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿದೆ.
ಸಾರ್ವಜನಿಕರಿಗೆ ಸದ್ಯದ ಕೊರೊನಾ ಪರಿಸ್ಥಿತಿಯಲ್ಲಿ ಮಾಸ್ಕ್ ಧರಿಸುವ ಅನಿವಾರ್ಯತೆಗಿಂತ ಧೂಳಿನಿಂದ ರಕ್ಷಿಸಿಕೊಳ್ಳಲು ಮಾಸ್ಕ್ ಧರಿಸಬೇಕಿದೆ. ರಸ್ತೆ ಗುಂಡಿಗಳನ್ನು ಮುಚ್ಚಿಸಲು ಪುರಸಭೆ, ಗುಂಡಿಗಳಲ್ಲಿ ಮಣ್ಣು ಭರ್ತಿ ಮಾಡಿ ತಾತ್ಕಾಲಿಕ ಕ್ರಮ ಕೈಗೊಂಡಿದೆ. ಇದೀಗ ಮಳೆ ಕಡಿಮೆಯಾಗಿ ರಸ್ತೆಯಲ್ಲಿ ವಾಹನಗಳ ಭರಾಟೆಗೆ ವಾಹನದ ಹೊಗೆಯೊಂದಿಗೆ ಧೂಳೂ ಮೇಲೆದ್ದು, ಇಡೀ ದಿನ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಧೂಳು ಆವರಿಸಿರುತ್ತದೆ.
ಪಟ್ಟಣದ ಮುಖ್ಯ ರಸ್ತೆಗಳ ಗುಂಡಿ ಮುಚ್ಚಿಸಲು ಡಾಂಬರ್ ಬಳಸದೆ ಮರಂ ಮಣ್ಣು ಸುರಿದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಧೂಳಿನ ರಸ್ತೆಯಲ್ಲಿ ಸಂಚರಿಸುವವರಿಗೆ, ಬೈಕ್ ಸವಾರರಿಗೆ ಕೊರೊನಾ ಪರಿಸ್ಥಿತಿಯಲ್ಲಿ ಶ್ವಾಸಕೋಶ ಸಂಬಂಧಿ ಕಾಯಿಲೆಯ ಆತಂಕ ಎದುರಾಗಿದೆ.