ಕೊಪ್ಪಳ : ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಹಿಳಾ ಕಾರ್ಮಿಕರನ್ನು ಹೆಚ್ಚು ಸಕ್ರಿಯರಾಗಿ ಮಾಡಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮಹಿಳಾ ಕಾಯಕೋತ್ಸವದಲ್ಲಿ ರಾಜ್ಯದಲ್ಲಿಯೇ ಕೊಪ್ಪಳ ಜಿಲ್ಲೆ ಎರಡನೇ ಸ್ಥಾನ ಪಡೆದಿದೆ.
ಉದ್ಯೋಗ ಖಾತ್ರಿ ಯೋಜನೆಯಿಂದ ಅನೇಕ ಕುಟುಂಬಗಳು ಇಂದು ಉದ್ಯೋಗ ಪಡೆದುಕೊಂಡು ಜೀವನ ನಡೆಸುತ್ತಿವೆ. ಈ ಯೋಜನೆ ದುಡಿಯಲು ಬಯಸುವ ಅನೇಕ ಕೂಲಿ ಕಾರ್ಮಿಕ ಕುಟುಂಬಗಳಿಗೆ ಅನುಕೂಲವಾಗಿದೆ.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಲು ರಾಜ್ಯ ಸರ್ಕಾರ ಪ್ರಾಯೋಗಿಕವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳ ಆಯ್ದ ಪಂಚಾಯತ್‌ಗಳಲ್ಲಿ ಮಹಿಳಾ ಕಾಯಕೋತ್ಸವ ನಡೆಸಲು ಸೂಚನೆ ನೀಡಿತ್ತು.
ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ಚೀಟಿ ಇಲ್ಲದ ಮಹಿಳೆಯರಿಗೆ ಉದ್ಯೋಗ ಚೀಟಿ ನೀಡಿ, ಅವರನ್ನು ಕೆಲಸದಲ್ಲಿ ತೊಡಗಿಸುವುದು ಈ ಮಹಿಳಾ ಕಾಯಕೋತ್ಸವದ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಗೆ ಕೊಪ್ಪಳ ಜಿಲ್ಲೆಯ ಮಹಿಳೆಯರು ಹೆಚ್ಚಿನ ಸಹಕಾರ ನೀಡಿದ್ದಾರೆ.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ತೊಡಗಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಮಾನವ ದಿನಗಳನ್ನು ಸೃಜಿಸಿದ್ದಾರೆ. ಈ ಹಿನ್ನೆಲೆ ರಾಜ್ಯದಲ್ಲಿ ಮಹಿಳಾ ಕಾಯಕೋತ್ಸವದಲ್ಲಿ ಕೊಪ್ಪಳ ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಮಹಿಳಾ ಕಾಯಕೋತ್ಸವದಲ್ಲಿ ಬಳ್ಳಾರಿ ಜಿಲ್ಲೆ ಮೊದಲ ಸ್ಥಾನದಲ್ಲಿದ್ದರೆ, ಕೊಪ್ಪಳ ಜಿಲ್ಲೆ 2ನೇ ಸ್ಥಾನ ಹಾಗೂ ರಾಯಚೂರು ಜಿಲ್ಲೆ 3ನೇ ಸ್ಥಾನದಲ್ಲಿದೆ.
ರಾಜ್ಯ ಸರ್ಕಾರದ ಸೂಚನೆಯಂತೆ ಕೊಪ್ಪಳ ಜಿಲ್ಲೆಯಲ್ಲಿಯೂ ಸಹ ಪ್ರತಿ ತಾಲೂಕಿನಿಂದ ನಾಲ್ಕು ಗ್ರಾಮ ಪಂಚಾಯತ್‌ಗಳಂತೆ ಒಟ್ಟು ಏಳು ತಾಲೂಕುಗಳಿಂದ 28 ಗ್ರಾಮ ಪಂಚಾಯತ್‌ಗಳಲ್ಲಿ ಮಹಿಳಾ ಕಾಯಕೋತ್ಸವ ನಡೆಸಲಾಗಿದೆ.
ಜಿಲ್ಲೆಯ 28 ಗ್ರಾಪಂಗಳ ವ್ಯಾಪ್ತಿಯಲ್ಲಿ 2,164 ಮಹಿಳೆಯರಿಗೆ ಖಾತ್ರಿ ಯೋಜನೆಯಲ್ಲಿ ಕೆಲಸ ನೀಡಿ, ಜನವರಿ 15ರಿಂದ ಫೆಬ್ರವರಿ 15ರವರೆಗೆ ಒಟ್ಟು 60 ಸಾವಿರ ಮಾನವ ದಿನಗಳನ್ನು ಸೃಜಿಸಲಾಗಿದೆ. ಸೃಜಿಸಲಾಗಿರುವ 60 ಸಾವಿರ ಮಾನವ ದಿನಗಳನ್ನು ಜಿಲ್ಲೆಯ ಒಟ್ಟು 150 ಗ್ರಾಮ ಪಂಚಾಯತ್‌ಗಳಿಂದ ವಿಭಾಗಿಸಿದಾಗ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 2,500 ಮಾನವ ದಿನಗಳು ಮಹಿಳಾ ಕಾಯಕೋತ್ಸವದಿಂದ ಸೃಜಿಸಿದಂತಾಗುತ್ತದೆ.
ಮಹಿಳಾ ಕಾಯಕೋತ್ಸವದಿಂದಾಗಿ ಖಾತ್ರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಮತ್ತಷ್ಟು ಅನುಷ್ಠಾನ ಮಾಡಲು ಉತ್ತೇಜನಾವಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಜಿಲ್ಲೆಯಲ್ಲಿ 99 ಸಾವಿರದಷ್ಟು ಉದ್ಯೋಗ ಚೀಟಿಗಳಿದ್ದವು. ಈ ಆರ್ಥಿಕ ವರ್ಷದಲ್ಲಿ ಅದು 1.54 ಲಕ್ಷದಷ್ಟಾಗಿದೆ ಎಂದು ಜಿಲ್ಲಾ ಪಂಚಾಯತ್ ಸಿಇಒ ರಘುನಂದನ್ ಮೂರ್ತಿ ತಿಳಿಸಿದ್ದಾರೆ.
ಉದ್ಯೋಗ ಖಾತ್ರಿ ಯೋಜನೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಮತ್ತು ಮಹಿಳಾ ಕಾಯಕೋತ್ಸವವನ್ನು ಇನ್ನಷ್ಟು ಗ್ರಾಮ ಪಂಚಾಯತಿಗಳಿಗೆ ವಿಸ್ತರಿಸಲು ಕೊಪ್ಪಳ ಜಿಲ್ಲಾ ಪಂಚಾಯತಿಗೆ ಹುಮ್ಮಸ್ಸು ಬಂದಿದೆ.