ಗಂಗಾವತಿ: ಸಾರ್ವಜನಿಕ ಶೌಚಾಲಯವನ್ನು ನೆಲಸಮ ಮಾಡಲು ಹೊರಟ ಗ್ರಾಮ ಪಂಚಾಯತಿ ಅಧಿಕಾರಿಗಳ ಕ್ರಮ ಖಂಡಿಸಿ, ಗ್ರಾಮದ ಮಹಿಳೆಯರು ಪಂಚಾಯಿತಿಗೆ ಮುತ್ತಿಗೆ ಹಾಕಿ, ಅಧಿಕಾರಿಗಳನ್ನು ಹೊರಕ್ಕೆ ಎಳೆದು ಬೀಗ ಹಾಕಿದ ಘಟನೆ ತಾಲೂಕಿನ ಹಣವಾಳದಲ್ಲಿ ನಡೆದಿದೆ.
ಗ್ರಾಮದ ಅಂಬೇಡ್ಕರ್ ವೃತ್ತದ ಸಮೀಪ ಇರುವ ಮಹಿಳಾ ಶೌಚಾಲಯದ ಕಟ್ಟಡ ನೆಲಸಮಕ್ಕೆ ತಾಲೂಕು ಪಂಚಾಯತಿಯ ಸಿಇಒ ಮೋಹನ್ ನೇತೃತ್ವದಲ್ಲಿ ಸಿಬ್ಬಂದಿ ಮುಂದಾಗಿದ್ದರು. ಇದನ್ನು ವಿರೋಧಿಸಿದ ಮಹಿಳೆಯರು ಸ್ಥಳಕ್ಕೆ ಆಗಮಿಸಿ ಪ್ರತಿಭಟನೆ ನಡೆಸಿದರು.
ಶೌಚಾಲಯ ನೆಲಸಮ ಮಾಡಿ ಅದೇ ಸ್ಥಳದಲ್ಲಿ ಸುಸಜ್ಜಿತ ಶೌಚಾಲಯ ನಿರ್ಮಾಣ ಮಾಡಿಕೊಡುವುದಾದರೆ ಮಾತ್ರ ಕಟ್ಟಡ ಒಡೆಯಲು ಅವಕಾಶ ಮಾಡಿ ಕೊಡುವುದಾಗಿ ಧರಣಿ ನಿರತ ಮಹಿಳೆಯರು ಪಟ್ಟು ಹಿಡಿದರು.
ಶೌಚಾಲಯ ನೆಲಸಮ ಮಾಡಿ ಗ್ರಾಮ ಪಂಚಾಯಿತಿಯ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ ಅಧಿಕಾರಿಗಳು ಯೋಜನೆ ರೂಪಿಸಿದ್ದರು ಎನ್ನಲಾಗಿದ್ದು, ಸುಲಭ ಶೌಚಾಲಯ ಬೇಕಿದ್ದರೆ ಕಟ್ಟಿ ಆದರೆ ಬೇರೆ ಯಾವ ಕಟ್ಟಡ ಕಟ್ಟಲು ಇಲ್ಲಿ ಅವಕಾಶ ನೀಡುವುದಿಲ್ಲ ಎಂದು ಮಹಿಳೆಯರು ಎಚ್ಚರಿಕೆ ನೀಡಿದ್ದಾರೆ.